ADVERTISEMENT

ಧ್ವನಿವರ್ಧಕಗಳ ಬಳಕೆ ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್‌

ಐಎಎನ್ಎಸ್
Published 6 ಮೇ 2022, 9:46 IST
Last Updated 6 ಮೇ 2022, 9:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಮಸೀದಿಗಳಲ್ಲಿ ಧ್ವನಿವರ್ಧಕಗಳ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯೊಂದನ್ನು ವಜಾಗೊಳಿಸಿರುವ ಅಲಹಾಬಾದ್‌ ಹೈಕೋರ್ಟ್‌, ‘ಧ್ವನಿವರ್ಧಕಗಳು ಮೂಲಭೂತ ಹಕ್ಕಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಸಾಂವಿಧಾನಿಕ ಹಕ್ಕು ಅಲ್ಲ ಎಂದು ಕಾನೂನು ಹೇಳುತ್ತದೆ ಎಂದು ನ್ಯಾಯಮೂರ್ತಿ ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಡಿಸೆಂಬರ್ 3, 2021 ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟರು(ಎಸ್‌ಡಿಎಂ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇರ್ಫಾನ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು.

ADVERTISEMENT

ಧೋರನ್‌ಪುರ ಗ್ರಾಮದ ನೂರಿ ಮಸೀದಿಯಲ್ಲಿ ಆಜಾನ್‌ಗಾಗಿ ಧ್ವನಿವರ್ಧಕ ಅಳವಡಿಸಲು ಮ್ಯಾಜಿಸ್ಟ್ರೇಟರು ಈ ಹಿಂದೆ ಅನುಮತಿ ನಿರಾಕರಿಸಿದ್ದರು.

ಮ್ಯಾಜಿಸ್ಟ್ರೇಟರ ಅದೇಶವು ಕಾನೂನುಬಾಹಿರ. ಇದು ‘ಮೂಲಭೂತ ಹಕ್ಕು’ಗಳು ಮತ್ತು ‘ಕಾನೂನಾತ್ಮಕ ಹಕ್ಕು’ಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ವಾದಿಸಿದ್ದರು.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ವಿವಾದವು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ.

ಅನುಮತಿ ಪಡೆದು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು. ಧಾರ್ಮಿಕ ಸ್ಥಳಗಳಲ್ಲಿನ ಧ್ವನಿವರ್ಧಕಗಳ ಶಬ್ದವು ಆವರಣದ ಹೊರಗೆ ಕೇಳಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೇ ಹೇಳಿದ್ದರು.

ಧ್ವನಿವರ್ಧಕಗಳಿಗೆ ಹೊಸ ಪರವಾನಗಿ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಯೋಗಿ ಹೇಳಿಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಧಾರ್ಮಿಕ ಸ್ಥಳಗಳಲ್ಲಿನ 17,000 ಧ್ವನಿವರ್ಧಕಗಳ ಶಬ್ದದ ಪ್ರಮಾಣವನ್ನು ತಗ್ಗಿಸಲಾಗಿತ್ತು.

ಅಲ್ಲದೇ, ಕಳೆದವಾರ 53 ಸಾವಿರಕ್ಕೂ ಅಧಿಕ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.