ಬಂಧನ
(ಪ್ರಾತಿನಿಧಿಕ ಚಿತ್ರ)
ಲಖನೌ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಾವಾನಾ ಪಟ್ಟಣದಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ಹಾಕಿದ್ದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಮಾವಾನಾ ಪಟ್ಟಣದ ಮುಖ್ಯ ದ್ವಾರದಲ್ಲಿ ಪೋಸ್ಟರ್ ಹಾಕಲಾಗಿತ್ತು. ಪೋಸ್ಟರ್ ಹಾಕಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು.
‘ಮನೋಜ್ ಶರ್ಮಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353 ಅಡಿಯಲ್ಲಿ ಇದ್ರಿಶ್, ತಸ್ಲೀಮ್, ರಿಹಾನ್, ಗುಲ್ಫಾಮ್ ಮತ್ತು ಹರೂನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಪೂನಂ ಜಾಡೋನ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಐವರನ್ನೂ ಬಂಧಿಸಲಾಗಿದ್ದು, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿವಾದದ ಬೆನ್ನಲ್ಲೇ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವದಂತಿಗಳನ್ನು ಹರಡುವುದನ್ನು ತಡೆಯಲು ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈಚೆಗೆ ರಾಯ್ ಬರೇಲಿಯಲ್ಲಿ ‘ಐ ಲವ್ ಮುಹಮ್ಮದ್’ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೇಹಾದ್ -ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಮೌಲ್ವಿ ತೌಕೀರ್ ರಜಾ ಖಾನ್ ಸಹವರ್ತಿ ನದೀಮ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
‘ನದೀಮ್ ಪ್ರತಿಭಟನೆಯ ರೂವಾರಿ ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ವಾಟ್ಸ್‌ಆ್ಯಪ್ ಮೂಲಕ 55 ಜನರಿಗೆ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ್ದಾನೆ. ಬಳಿಕ ಸುಮಾರು 1,600 ಜನರನ್ನು ಸೇರಿಸಿದ್ದಾನೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.