ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಮತ್ತೆ ಪ್ರಸ್ತಾಪಗೊಂಡ ‘ಜಿನ್ನಾ’ ಹೆಸರು

ಧರ್ಮ ಆಧಾರಿತ ಧ್ರುವೀಕರಣ * ಈಗ ನಡ್ಡಾ ಸರದಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 15:50 IST
Last Updated 11 ಡಿಸೆಂಬರ್ 2021, 15:50 IST
ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ   

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣಕ್ಕೆ ಎಲ್ಲ ಪಕ್ಷಗಳ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ. ಇಂಥ ಮುಖಂಡರ ಸಾಲಿಗೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಸೇರ್ಪಡೆಯಾಗಿದ್ದಾರೆ.

ಮೀರತ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಬ್ಬು (ಹಿಂದಿಯಲ್ಲಿ ಗನ್ನಾ) ನಮ್ಮದಾಗಿದ್ದರೆ, ನಮ್ಮ ರಾಜಕೀಯ ಎದುರಾಳಿಗಳು ಜಿನ್ನಾ ಹೊಂದಿದ್ದಾರೆ. ಈ ಸ್ಪರ್ಧೆಯಲ್ಲಿ ಕಬ್ಬಿಗೇ ಗೆಲುವು ಸಿಗಲಿದೆ’ ಎಂದು ನಡ್ಡಾ ಹೇಳಿದರು.

ಉತ್ತರ ಪ್ರದೇಶ ಸಚಿವ ದಿನೇಶ್‌ ಖಾಟಿಕ್‌ ಮಾತನಾಡಿ, ‘ಭಾರತವನ್ನು ಹಿಂದೂ ರಾಷ್ಟ್ರ ಎಂಬುದಾಗಿ ಘೋಷಿಸಬೇಕು’ ಎಂದರು.

ADVERTISEMENT

‘ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪ್ರಧಾನಮಂತ್ರಿಗಳು ಕೂಡ ಗೋರಿಗಳ ಮುಂದೆ ಬಾಗಬೇಕಿತ್ತು. ಆದರೆ, ದೇವಸ್ಥಾನಗಳ ನಿರ್ಮಾಣಕ್ಕೆ ಅರಬ್‌ ರಾಷ್ಟ್ರಗಳಿಗೆ ಮನವಿ ಮಾಡಿರುವಂಥ ಪ್ರಧಾನಿಯನ್ನು ಈಗ ನಾವು ಹೊಂದಿದ್ದೇವೆ’ ಎಂದರು.

ಇದಕ್ಕೂ ಮುನ್ನ, ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರನ್ನು ‘ಅಖಿಲೇಶ್ ಅಲಿ ಜಿನ್ನಾ’ ಎಂದು ಕರೆದಿದ್ದರು.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್‌ ಅವರು ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರದ ಅವಧಿಯನ್ನು ಘಜ್ನಿ ಮೊಹಮ್ಮದ್‌ ಹಾಗೂ ಮೊಹಮ್ಮದ್‌ ಘೋರಿ ಆಳ್ವಿಕೆಗೆ ಹೋಲಿಸಿದ್ದರು.

‘ಘಜ್ನಿ ಹಾಗೂ ಘೋರಿ ಅವರಂತೆ ಇವರು (ಅಖಿಲೇಶ್‌) ಕೂಡ ರಾಜ್ಯವನ್ನು ಲೂಟಿ ಮಾಡಿದ್ದಾರೆ. ನಮ್ಮ ಧಾರ್ಮಿಕ ಅಸ್ಮಿತೆ ಮೇಲೆ ಹಲ್ಲೆ ನಡೆಸಿದ್ದಾರೆ. ದುರ್ಗಾ ಪೂಜೆಗಾಗಿ ಪೆಂಡಾಲ್‌ ಅಳವಡಿಸುವ ಸಲುವಾಗಿ ಇವರ ಆಡಳಿತದ ಅವಧಿಯಲ್ಲಿ ಅಧಿಕಾರಿಗಳ ಮುಂದೆ ಹಿಂದೂಗಳು ಅಂಗಲಾಚಬೇಕಿತ್ತು’ ಎಂದು ಸ್ವತಂತ್ರದೇವ್‌ ಸಿಂಗ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.