ADVERTISEMENT

ಬೈರಿಯಾದಲ್ಲಿ ಸ್ಪರ್ಧಿಸಿ: ಅಖಿಲೇಶ್‌ ಯಾದವ್‌ಗೆ ಬಿಜೆಪಿ ಶಾಸಕ ಸವಾಲು

1 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಅಖಿಲೇಶ್‌ ವಿರುದ್ಧ ಗೆಲ್ಲುತ್ತೇನೆ: ಹಾಲಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌

ಪಿಟಿಐ
Published 1 ಡಿಸೆಂಬರ್ 2021, 11:08 IST
Last Updated 1 ಡಿಸೆಂಬರ್ 2021, 11:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೈರಿಯಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಲ್ಲಿನ ಹಾಲಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಸವಾಲು ಹಾಕಿದ್ದಾರೆ.

'1 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಅಖಿಲೇಶ್‌ ಯಾದವ್‌ ಅವರನ್ನು ಸೋಲಿಸದಿದ್ದರೆ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ' ಎಂದು ಸುರೇಂದ್ರ ಸಿಂಗ್‌ ಅವರು ಜಿಲ್ಲಾ ಕೇಂದ್ರದಲ್ಲಿ ಬಿಜೆಪಿಯ ಕಿಸಾನ್‌ ಮೋರ್ಚಾ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಸುದ್ದಿಗಾರರ ಜೊತೆ ಹೇಳಿದರು.

ಇದೇ ವೇಳೆ ಭಾರತೀಯ ಕಿಸಾನ್‌ ಒಕ್ಕೂಟದ ಮುಖಂಡ ರಾಕೇಶ್‌ ಟಿಕಾಯತ್‌ ಅವರನ್ನು 'ಅನುಭವೀ ರಾಜಕಾರಣಿ' ಎಂದು ಕರೆದಿರುವ ಸುರೇಂದ್ರ ಸಿಂಗ್‌, ಟಿಕಾಯತ್‌ ಅವರು ರೈತರ ಚಳುವಳಿಯನ್ನು ನಡೆಸುತ್ತ ಪ್ರತಿಪಕ್ಷಗಳ ಆಶ್ರಯವನ್ನು ಆನಂದಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕರಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

'ಎಸ್‌ಪಿ ಮತ್ತು ಕಾಂಗ್ರೆಸ್‌ನ ಆಣತಿಯಂತೆ ಟಿಕಾಯತ್‌ ರೈತರ ಚಳುವಳಿಯನ್ನು ಮುನ್ನಡೆಸುತ್ತಿದ್ದಾರೆ' ಎಂದು ದೂರಿದ ಸುರೇಂದ್ರ ಸಿಂಗ್‌, ಪ್ರಧಾನಿ ನರೇಂದ್ರ ಮೋದಿ ಅವರು 'ಜನರ ಭಾವನೆಗಳಿಗೆ ಬೆಲೆ ಕೊಟ್ಟು' ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ. ನಂತರವೂ ಚಳುವಳಿಯನ್ನು ಮುಂದುವರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

'ಯಾದವ್‌ ಮತ್ತು ಟಿಕಾಯತ್‌ ನಂಬಿಕೆಗೆ ಅರ್ಹರಲ್ಲ. ಅವರು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ವಿರುದ್ಧ ನಿಲ್ಲಲಾರರು. ಮೋದಿ ವಿಶ್ವವನ್ನೇ ತನ್ನ ಕುಟುಂಬ ಎಂದುಕೊಂಡಿದ್ದಾರೆ. ಆದರೆ ಯಾದವ್‌ ಅವರಿಗೆ ಅವರ ಕುಟುಂಬವೇ ವಿಶ್ವವಾಗಿದೆ. ಯಾರು ತನ್ನ ಕುಟುಂಬವನ್ನೇ ವಿಶ್ವವೆಂದು ಪರಿಗಣಿಸುತ್ತಾರೋ ಅವರು ಅಪ್ರಾಮಾಣಿಕರು' ಎಂದು ಸುರೇಂದ್ರ ಸಿಂಗ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.