ADVERTISEMENT

ಉ. ಪ್ರದೇಶ: ಎಸ್‌ಪಿಗೆ ಮೌರ್ಯ, ಸೈನಿ ಅಧಿಕೃತ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 19:26 IST
Last Updated 14 ಜನವರಿ 2022, 19:26 IST
ಲಖನೌನಲ್ಲಿ ಎಸ್‌ಪಿಗೆ ಸೇರ್ಪಡೆಗೊಂಡ ಬಿಜೆಪಿ ಶಾಸಕರು ಹಾಗೂ ಸಚಿವರು– ಐಎಎನ್‌ಎಸ್‌ ಚಿತ್ರ
ಲಖನೌನಲ್ಲಿ ಎಸ್‌ಪಿಗೆ ಸೇರ್ಪಡೆಗೊಂಡ ಬಿಜೆಪಿ ಶಾಸಕರು ಹಾಗೂ ಸಚಿವರು– ಐಎಎನ್‌ಎಸ್‌ ಚಿತ್ರ   

ಲಖನೌ: ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಅವರು ಶುಕ್ರವಾರ ಸಮಾಜವಾದಿ ಪಕ್ಷ ಸೇರಿದರು. ಅವರ ಜತೆಯಲ್ಲಿ ಇನ್ನೂ ಐವರು ಬಿಜೆಪಿ ಶಾಸಕರು ಸಮಾಜವಾದಿ ಪಕ್ಷ ಸೇರಿದ್ದಾರೆ.

ಇಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ನಾಯಕರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಈ ಶಾಸಕರ ಜತೆಯಲ್ಲಿ ಬಿಜೆಪಿಯ ಇನ್ನೂ ಹಲವು ಮುಖಂಡರುಎಸ್‌ಪಿ ಸೇರಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ್ದ ದಾರಾ ಸಿಂಗ್ ಚೌಹಾಣ್ ಇನ್ನೂ ಸಮಾಜವಾದಿ ಪಕ್ಷ ಸೇರಿಲ್ಲ. ಈ ಬಗ್ಗೆ ಅವರಿನ್ನೂ ಯಾವುದೇ ಮಾಹಿತಿ ನೀಡಿಲ್ಲ.

ಬಿಜೆಪಿ ಶಾಸಕರಾಗಿದ್ದ ರೋಷನ್‌ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಮುಖೇಶ್ ವರ್ಮಾ, ವಿನಯ್ ಶಾಖ್ಯ ಮತ್ತು ಭಗವತಿ ಸಾಗರ್ ಅವರು ಸಮಾಜವಾದಿ ಪಕ್ಷ ಸೇರಿದರು. ಮತ್ತೊಬ್ಬ ಬಿಜೆಪಿ ಶಾಸಕ ಚೌಧರಿ ಅಮರ್ ಸಿಂಗ್ ಅವರು ಸಮಾಜವಾದಿ ಪಕ್ಷದ ಮಿತ್ರಪಕ್ಷವಾದ ಆರ್‌ಎಲ್‌ಡಿ ಸೇರಿದರು.

ADVERTISEMENT

ಬಿಜೆಪಿಗೆ ರಾಜೀನಾಮೆ ನೀಡಿರುವ 11 ಶಾಸಕರಲ್ಲಿ ಇನ್ನೂ ಹಲವರು ಸಮಾಜವಾದಿ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.

‘ಇದೆಲ್ಲಾ ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನೂ ಹತ್ತಾರು ನಾಯಕರು ಬಿಜೆಪಿ ತೊರೆಯಲಿದ್ದಾರೆ. ದೆಹಲಿಯಲ್ಲಿ ಇರುವವರು ಸಹ ಬಾಬಾ ಆದಿತ್ಯನಾಥ ಅವರನ್ನು ರಕ್ಷಿಸಲು ಸಾಧ್ಯವಿಲ್ಲ’ ಎಂದು ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.

‘ಇಂದು ಬಿಜೆಪಿಯ ಅಂತ್ಯಕ್ಕೆ ನಾಂದಿ ಹಾಡಲಾಗಿದೆ. ದೇಶದ ಜನರನ್ನು ಬಿಜೆಪಿ ಹಾದಿತಪ್ಪಿಸಿದೆ. ಜನರ ಕಣ್ಣಿಗೆ ಮಣ್ಣೆರಚಿ, ಅವರನ್ನು ಲೂಟಿ ಮಾಡಿದೆ. ಈಗ ಬಿಜೆಪಿಯನ್ನು ಕಿತ್ತೊಗೆಯುವ ಸಮಯ ಬಂದಿದೆ. ಬಿಜೆಪಿಯ ವಸೂಲಿಬಾಜಿಯಿಂದ ಉತ್ತರ ಪ್ರದೇಶವನ್ನು ಮುಕ್ತಗೊಳಿಸುವ ಸಮಯವಿದು’ ಎಂದು ಹೇಳಿದ್ದಾರೆ.

‘ಈಗ ಸ್ಪರ್ಧೆ 85 ವರ್ಸಸ್ 15’

‘ನಾವು ಬಿಜೆಪಿ ತೊರೆದಿದ್ದೇವೆ. ಯೋಗಿ ಆದಿತ್ಯನಾಥ ಅವರು ಹೇಳಿದ್ದಂತೆ ಸ್ಪರ್ಧೆ 80 ವರ್ಸಸ್ 20ರ (ಹಿಂದೂ ವರ್ಸಸ್ ಮುಸ್ಲಿಂ) ಮಧ್ಯೆ ನಡೆಯುವುದಿಲ್ಲ. ಈಗ ಸ್ಪರ್ಧೆ ನಡೆಯುವುದು 85 ವರ್ಸಸ್ 15ರ ಮಧ್ಯೆ (ದಲಿತರು, ಹಿಂದುಳಿದವರು, ಮುಸ್ಲಿಮರು ವರ್ಸಸ್ ಉಳಿದವರ ಮಧ್ಯೆ)’ ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ಯೋಗಿ ಆದಿತ್ಯನಾಥ ಅವರ ವಿರುದ್ಧ ಹರಿಹಾಯ್ದಿದ್ದಾರೆ.

‘ಆದಿತ್ಯನಾಥ ಅವರ ದೃಷ್ಟಿಯಲ್ಲಿ ಮೇಲ್ಜಾತಿಯ ಜನರಷ್ಟೇ ಹಿಂದೂಗಳು. ಯೋಗಿ ಅವರೇ ನಿಮ್ಮ ದೃಷ್ಟಿಯಲ್ಲಿ ದಲಿತರು ಹಿಂದೂಗಳಲ್ಲವೇ? ಅವರ ದೃಷ್ಟಿಯಲ್ಲಿ ದಲಿತರು ಮತ್ತು ಹಿಂದುಳಿದವರು ಹಿಂದೂಗಳಲ್ಲ. ಹೀಗಾಗಿಯೇ ಶಿಕ್ಷಕರ ನೇಮಕಾತಿಯಲ್ಲಿ ಈ ವರ್ಗಗಳಿಗೆ ಅವರು ಮೀಸಲಾತಿ ನೀಡಿಲ್ಲ. ಯೋಗಿ ಅವರೇ ಈಗ ನೀವು ಏನು ಮಾಡುತ್ತೀರಿ ಅಂದರೆ, ಹೇಗಿದ್ದರೂ ಚುನಾವಣೆ ಸೋಲುತ್ತೀರಿ. ಹೀಗಾಗಿ ನಿಮ್ಮ ಗಂಟನ್ನು ಕಟ್ಟಿಕೊಂಡು ಹೊರಡಿ’ ಎಂದು ಮೌರ್ಯ ಲೇವಡಿ ಮಾಡಿದ್ದಾರೆ.

‘ಬಿಜೆಪಿ ಸಹ ಹಿಂದುಳಿದ ವರ್ಗಗಳಿಗೆ ಮೋಸ ಮಾಡಿದೆ. ಹಿಂದುಳಿದ ವರ್ಗಗಳ ನಾಯಕರಾದ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಬಿಜೆಪಿ ಆಮಿಷ ಒಡ್ಡಿತ್ತು. ನನಗೂ ಆ ಆಮಿಷ ಒಡ್ಡಿತ್ತು. ಆದರೆ ನಮ್ಮನ್ನೆಲ್ಲಾ ಕಡೆಗಣಿಸಿ ಯೋಗಿ ಆದಿತ್ಯನಾಥ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿತು. ಯೋಗಿ ಅವರು ನಮ್ಮನ್ನು ಮನುಷ್ಯರ ರೀತಿಯಲ್ಲಿ ನೋಡಿಕೊಳ್ಳಲೇ ಇಲ್ಲ. ಆದರೆ ಅಖಿಲೇಶ್ ಅವರು ನಮ್ಮನ್ನು ಸಮಾನರಾಗಿ ನೋಡುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.