ADVERTISEMENT

ಪತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಇನ್ನೊಂದು ಮದುವೆ ಮಾಡಲಾಗಿದೆ: ಪತ್ನಿ ದೂರು

ಪಿಟಿಐ
Published 28 ಡಿಸೆಂಬರ್ 2023, 3:39 IST
Last Updated 28 ಡಿಸೆಂಬರ್ 2023, 3:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹಮೀರ್‌ಪುರ (ಉತ್ತರ ಪ್ರದೇಶ): ಸರ್ಕಾರಿ ನೌಕರನಾಗಿರುವ ತಮ್ಮ ಪತಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ, ಮತ್ತೊಂದು ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಕಾನ್ಪುರ ನಿವಾಸಿಯಾಗಿರುವ ಆರತಿ ಗುಪ್ತಾ ಎಂಬವರು ನೀಡಿರುವ ದೂರಿನನ್ವಯ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಮೀರ್‌ಪುರ ಜಿಲ್ಲೆಯ ಮೌದಾಹ ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಅಧಿಕಾರಿಯಾಗಿರುವ ತಮ್ಮ ಪತಿ ಆಶಿಷ್‌ ಕುಮಾರ್‌ ಗುಪ್ತಾ, ಕಳೆದ ನಾಲ್ಕು ತಿಂಗಳಿನಿಂದ ಮನೆಗೆ ಬಂದಿಲ್ಲ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ, ರುಖ್‌ಸಾರ್‌ ಎಂಬ ಮಹಿಳೆಯೊಂದಿಗೆ ವಿವಾಹ ಮಾಡಿಸಲಾಗಿದೆ. ಮದುವೆ ವಿಚಾರ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಿತು ಎಂದು ಆರತಿ ಗುಪ್ತಾ ದೂರು ನೀಡಿದ್ದಾರೆ.

ADVERTISEMENT

ರುಖ್‌ಸಾರ್‌ ಜೊತೆ ತಮ್ಮ ಪತಿ ಅಕ್ರಮ ಸಂಬಂಧ ಹೊಂದಿದ್ದರು. ಹೀಗಾಗಿ, ಅವರನ್ನು ರುಖ್‌ಸಾರ್‌ಳ ತಂದೆ, ಮೌಲ್ವಿ ಬಾಬು ಅಧಾತಿ ಹಾಗೂ ಇತರ ನಾಲ್ಕು–ಐದು ಮಂದಿ ಡಿಸೆಂಬರ್‌ 24ರಂದು ಬಲವಂತವಾಗಿ ಮತಾಂತರಗೊಳಿಸಿ, ಮದುವೆ ಮಾಡಿಸಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಶಿಷ್‌ ಗುಪ್ತಾ, ರುಖ್‌ಸಾರ್‌, ಆಕೆಯ ತಂದೆ, ಮೌದಾಹದ ಮಸೀದಿಯೊಂದರ ಮೌಲ್ವಿ ಹಾಗೂ ಇತರ ಐವರು ಅಪರಿಚಿತರ ವಿರುದ್ಧ ಐಪಿಸಿಯ ಸೆಕ್ಷನ್‌ 494 (ಪತಿ ಅಥವಾ ಪತ್ನಿ ಬದುಕಿದ್ದಾಗಲೇ ಇನ್ನೊಂದು ಮದುವೆಯಾಗುವುದು) ಹಾಗೂ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೌಲ್ವಿ ಹಾಗೂ ಮತ್ತೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆಶಿಷ್‌ ಗುಪ್ತಾ ಎಲ್ಲಿದ್ದಾರೆ ಎಂಬುದು ಈವರೆಗೆ ಪತ್ತೆಯಾಗಿಲ್ಲ.

ಆಶಿಷ್‌ ಗುಪ್ತಾ, ಮೌದಾಹ ಮಸೀದಿಯಲ್ಲಿ ನಮಾಜ್ ಮಾಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಆದರೆ, ಅದು ಖಚಿತವಾಗಿಲ್ಲ. ಆಶಿಷ್‌ ಗುಪ್ತಾ ತಮ್ಮನ್ನು ತಾವು ಮೊಹಮ್ಮದ್‌ ಯೂಸುಫ್‌ ಎಂದು ಪರಿಚಯಿಸಿಕೊಂಡಿದ್ದರು ಎಂದು ಮಸೀದಿಯ ಉಸ್ತುವಾರಿಗಳು ತನಿಖೆ ವೇಳೆ ಹೇಳಿಕೆ ನೀಡಿದ್ದಾರೆ.

ತನಿಖೆಯ ಭಾಗವಾಗಿ ಸ್ಥಳೀಯರ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಆಶಿಷ್‌ ಗುಪ್ತಾ ನಮಾಜ್ ಮಾಡಿದ್ದಾರೆ ಎಂಬುದು ಖಾತ್ರಿಯಾಗಿಲ್ಲ ಎಂದು ಮೌದಾಹ ತಹಶೀಲ್ದಾರ್‌ ಬಲರಾಮ್ ಗುಪ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.