ADVERTISEMENT

ಪೂರ್ವಾಂಚಲ ಪ್ರದೇಶ: ಬಿಜೆಪಿ–ಎಸ್‌ಪಿ ನಡುವೆ ಕಠಿಣ ಸ್ಪರ್ಧೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಬಿಜೆಪಿ– ಎಸ್‌ಪಿ ನಡುವೆ ನೇರ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:45 IST
Last Updated 6 ಜನವರಿ 2022, 19:45 IST
ಅಖಿಲೇಶ್ ಯಾದವ್ ಮತ್ತು ಸಿಎಂ ಯೋಗಿ ಆದಿತ್ಯನಾಥ್‌
ಅಖಿಲೇಶ್ ಯಾದವ್ ಮತ್ತು ಸಿಎಂ ಯೋಗಿ ಆದಿತ್ಯನಾಥ್‌   

ಲಖನೌ: ಜಾತಿಯೇ ನಿರ್ಣಾಯಕ ಪಾತ್ರವಹಿಸುವ ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದಲ್ಲಿ ಈ ಬಾರಿಯ ವಿಧಾನಸಭೆ ಚುನಾವ
ಣೆಯಲ್ಲಿಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಅತ್ಯಂತ ಕಠಿಣ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ. ಎರಡೂ ಪಕ್ಷಗಳು ತಮ್ಮ ಬೆಂಬಲ ನೆಲೆಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿವೆ.

ಇಲ್ಲಿ ಒಟ್ಟು 164 ಸ್ಥಾನಗಳಿವೆ.2017ರ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ ತನ್ನ ಮೈತ್ರಿ ಪಕ್ಷಗಳಾದ ಅಪ್ನಾ ದಳ (ಎಡಿ) ಮತ್ತು ಸುಹೇಲ್‌ ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಜೊತೆ ಸೇರಿ 115 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 17 ಮತ್ತು ಬಿಎಸ್‌ಪಿ 14 ಸ್ಥಾನಗಳು ಮತ್ತು ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಗೆದ್ದಿದ್ದವು. ಇತರರು 16 ಸೀಟುಗಳನ್ನು ಗೆದ್ದಿದ್ದರು.

ಆದರೆ ಈ ಬಾರಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. 2017ರಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಎಸ್‌ಬಿಎಸ್‌ಪಿ ಈ ಬಾರಿ ಎಸ್‌ಪಿ ಜೊತೆ ಕೈಜೋಡಿಸಿದೆ. ಈ ಪಕ್ಷವು ರಾಜ್‌ಭರ್‌ ಸಮುದಾಯದ ಬೆಂಬಲ ಹೊಂದಿದೆ. ವಾರಾಣಸಿ, ಆಜಂಗಡ, ಜೌನ್‌ಪುರ, ಮೌ, ಬಲ್ಲಿಯ ಮತ್ತು ಗಾಜಿಪುರ ಸೇರಿಪೂರ್ವಾಂಚಲ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಈ ಸಮುದಾಯದ ಮತದಾರರು ಶೇ 12 ರಿಂದ 23ರಷ್ಟಿದ್ದಾರೆ.ಅದೇ ರೀತಿ, ಜನವಾದಿ ಪಕ್ಷಕ್ಕೆ (ಸಮಾಜವಾದಿ) ನೋನಿಯ ಸಮುದಾಯದ ಬೆಂಬಲ ಇದೆ. ಈ ಪಕ್ಷವೂ ಈ ಬಾರಿ ಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ. 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈ ಸಮುದಾಯ ತನ್ನ ಪ್ರಭಾವ ಹೊಂದಿದೆ.ತನ್ನ ಎಂದಿನ ಮತದಾರರಾದ ಯಾದವರು ಮತ್ತು ಮುಸ್ಲಿಮರ ಮತಗಳ ಜೊತೆಗೆ ರಾಜ್‌ಭರ್‌ ಮತ್ತು ನೊನಿಯ ಸಮುದಾಯಗಳ ಮತಗಳನ್ನು ತನ್ನತ್ತ ಸೆಳೆಯುವಲ್ಲಿ ಎಸ್‌ಪಿ ಸಫಲವಾದರೆ ಈ ಭಾಗದಲ್ಲಿ ಬಿಜೆಪಿಗೆ ಮತ ಗಳಿಸುವುದು ಕಷ್ಟವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ADVERTISEMENT

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದ್ದರೆ,2017ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ನೀಡಿದ್ದಂಥ ಪ್ರದರ್ಶನವನ್ನೇ ಈ ಬಾರಿಯೂ ಪುನರಾವರ್ತಿಸಬೇಕು. ಏಕೆಂದರೆ, ಪಶ್ಚಿಮ ಭಾಗದಲ್ಲಿ ಜಾಟ್‌ ಸಮುದಾಯದ ಅಸಹನೆಗೆ ಬಿಜೆಪಿ ಗುರಿಯಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸಿದ ರೈತರಲ್ಲಿ ಈ ಭಾಗದ ಜನರೂ ಇದ್ದರು.

ಹಾಗಾಗಿ, ಪೂರ್ವಾಂಚಲ ಪ್ರದೇಶದಲ್ಲಿ ತನ್ನ ಹಿಡಿತ ಸಡಿಲವಾಗದಂತೆ ಬಿಜೆಪಿ ಶ್ರವಹಿಸುತ್ತಿದೆ. ಅದಕ್ಕಾಗಿ, ಸಾರ್ವಜನಿಕ ಸಭೆಗಳಲ್ಲಿ ಹಿಂದುತ್ವ ಕಾರ್ಯಸೂಚಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಜೊತೆಗೆ, ಹೊಸದಾಗಿ ನಿರ್ಮಿಸಲಾಗಿರುವ ಎಕ್ಸ್‌ಪ್ರೆಸ್‌ವೇಯನ್ನೂ ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದೆ. ಹಿಂದೂ ಪುಣ್ಯಕ್ಷೇತ್ರಗಳಾದ ಅಯೋಧ್ಯೆ, ಪ್ರಯಾಗ್‌ರಾಜ್‌, ಮಿರ್ಜಾಪುರ ಮತ್ತು ವಾರಾಣಸಿಯಲ್ಲಿ ಅಭಿವೃದ್ಧಿ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.