ADVERTISEMENT

ಉತ್ತರ ಪ್ರದೇಶ: ಎಸ್‌ಪಿ – ಬಿಜೆಪಿ ಜಾಹೀರಾತು ಸಮರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 19:31 IST
Last Updated 7 ಜನವರಿ 2022, 19:31 IST
ಅಖಿಲೇಶ್ ಯಾದವ್ ಮತ್ತು ಸಿಎಂ ಯೋಗಿ ಆದಿತ್ಯನಾಥ್‌
ಅಖಿಲೇಶ್ ಯಾದವ್ ಮತ್ತು ಸಿಎಂ ಯೋಗಿ ಆದಿತ್ಯನಾಥ್‌   

ಲಖನೌ: ಚುನಾವಣಾ ರ‍್ಯಾಲಿಗಳಲ್ಲಿ ಪರಸ್ಪರ ಕೆಸರೆರಚಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳು ಈಗ ಮಾಧ್ಯಮಗಳ ಮೂಲಕ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಯಾವ ಪಕ್ಷದಆಡಳಿತದಲ್ಲಿ ಉತ್ತರ ಪ್ರದೇಶಹೆಚ್ಚು ಅಭಿವೃದ್ಧಿ ಹೊಂದಿತು ಎಂಬ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಬಿಜೆಪಿ ಮತ್ತು ಸಮಾಜವಾದಿ ಪಕ್ಷ (ಎಸ್‍ಪಿ) ಜಾಹೀರಾತು ಸಮರ ನಡೆಸುತ್ತಿವೆ.

ಲಖನೌನ ಮುಖ್ಯ ರಸ್ತೆ ಮಾರ್ಗಗಳು ಮತ್ತು ಬೀದಿಗಳಲ್ಲಿ ಬಿಜೆಪಿಯು ಫಲಕಗಳನ್ನು ಪ್ರದರ್ಶಿಸುವ ಮೂಲಕ ಈ ಪೈಪೋಟಿ ಆರಂಭವಾಯಿತು. 2017ರ ಹಿಂದಿನ ಎಸ್‌ಪಿ ಸರ್ಕಾರ ಮತ್ತು ಈಗಿನ ತಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೋಲಿಕೆ ಮಾಡಿರುವ ಫಲಕಗಳನ್ನುಬಿಜೆಪಿ ಪ್ರದರ್ಶಿಸಿತ್ತು. ಎಸ್‌ಪಿ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶ ಮಾಫಿಯಾ ಆಡಳಿತಕ್ಕೆ ಒಳಗಾ
ಗಿತ್ತು ಎಂದು ಫಲಕಗಳಲ್ಲಿ ಹೇಳಲಾಗಿತ್ತು.

ಬಿಜೆಪಿ ಪ್ರದರ್ಶಿಸಿದ್ದ ಫಲಕಗಳಿಗೆ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುವ ಮೂಲಕ ಎಸ್‌ಪಿ ಪ್ರತ್ಯುತ್ತರ ನೀಡಿತ್ತು. ಈಗಿನ ಬಿಜೆಪಿ ಸರ್ಕಾರದ ಸಾಧನೆಗಳ ಜೊತೆ ಹಿಂದಿನ ತನ್ನ ಸರ್ಕಾರದ ಸಾಧನೆಗಳ ಹೋಲಿಕೆ ಮಾಡಿತ್ತು. ಎಸ್‌ಪಿ ಸರ್ಕಾರದಲ್ಲೇ ಉತ್ತರ ಪ್ರದೇಶ ಅತಿಹೆಚ್ಚು ಅಭಿವೃದ್ಧಿ ಹೊಂದಿತ್ತು ಎಂದು ಜಾಹೀರಾತಿನಲ್ಲಿ ಎಸ್‌ಪಿ ಹೇಳಿತ್ತು. ಇದರ ಜೊತೆ, ಕೋವಿಡ್‌ ಎರಡನೇ ಅಲೆ ವೇಳೆ ಲಖನೌನ ಚಿತಾಗಾರಗಳಲ್ಲಿ ಮೃತದೇಹಗಳನ್ನು ಸುಟ್ಟ ಚಿತ್ರಗಳು ಮತ್ತು ಹಾಥರಸ್‌ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ಮಧ್ಯರಾತ್ರಿ ಸುಟ್ಟ ಚಿತ್ರಗಳನ್ನೂ ಜಾಹೀರಾತಿನಲ್ಲಿ ಬಳಸಿಕೊಂಡಿರುವ ಎಸ್‌ಪಿ, ‘ವ್ಯತ್ಯಾಸ ಸ್ಪಷ್ಟವಾಗಿದೆ. 2022ರಲ್ಲಿ ಬಿಜೆಪಿ ಸೋಲುವುದೂ ಸ್ಪಷ್ಟವಾಗಿದೆ’ ಎಂದು ಹೇಳಿತ್ತು.

ADVERTISEMENT

ಎಸ್‌ಪಿಯ ಜಾಹೀರಾತಿಗೆ ಉತ್ತರವಾಗಿ ಶುಕ್ರವಾರದ ಪತ್ರಿಕಗಳಲ್ಲಿ ಜಾಹೀರಾತನ್ನು ನೀಡಿರುವ ಬಿಜೆಪಿ, ತನ್ನ ಅವಧಿಯಲ್ಲಿ ಮಾಡಲಾದ ಸಾಧನೆಗಳ ಪಟ್ಟಿ ನೀಡಿದೆ. ಅದರಲ್ಲಿ ಎಕ್ಸ್‌ಪ್ರೆಸ್‌ವೇ ಚಿತ್ರವನ್ನೂ ಸೇರಿಸಿದೆ. ಬಿಜೆಪಿ ಅವಧಿಯಲ್ಲೇ ಉತ್ತರ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದಿತು ಎಂದು ಸಮರ್ಥಿಸಿಕೊಂಡಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳ ಕುರಿತ ಜಾಹೀರಾತು ಫಲಕಗಳಿಂದಲೇಉತ್ತರ ಪ್ರದೇಶದ ನಗರಗಳು ಮತ್ತು ಪಟ್ಟಣಗಳನ್ನು ಬಿಜೆಪಿಯು ತುಂಬಿಸಿದೆ.

ಇತ್ತೀಚೆಗೆ ಬರೇಲಿಯಲ್ಲಿ ಸಾರ್ವಜನಿಕ ಸಭೆನಡೆಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ 2,000ಕ್ಕೂ ಹೆಚ್ಚು ಫಲಕಗಳು ದೆಹಲಿಯಲ್ಲಿಯೇ ಇವೆ’ ಎಂದು ಹೇಳಿದ್ದರು.

ಅಖಿಲೇಶ್‌ಗೆ ಬಿಜೆಪಿ ಪ್ರತ್ಯುತ್ತರ

ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರು ಲಖನೌ ಹತ್ತಿರದ ಗ್ರಾಮದ ಪರಶುರಾಮ ದೇವಾಲಯದಲ್ಲಿಇತ್ತೀಚೆಗೆ ಪೂಜೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಮತ್ತು ಬಿಜೆಪಿಯ ಇತರ ನಾಯಕರು ಲಖನೌನ ದೇವಸ್ಥಾನವೊಂದರಲ್ಲಿ ಪರಶುರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಪರಶುರಾಮ ಬ್ರಾಹ್ಮಣರು ಪೂಜಿಸುವ ದೇವರು. ಲಖನೌನ ಹೊಸವೀರ್‌ ದೇವಾಲಯದಲ್ಲಿ ಈ ಮೂರ್ತಿಯನ್ನು ಹೊಸದಾಗಿ ಪ್ರತಿಷ್ಠಾಪಿಸಲಾಗಿದೆ.ಆರು ಅಡಿ ಉದ್ದದ ಈ ಮೂರ್ತಿಯನ್ನು ರಾಜಸ್ಥಾನದಿಂದ ಲಖನೌಗೆ ತರಲಾಗಿದೆ ಎನ್ನಲಾಗಿದೆ.

ಬ್ರಾಹ್ಮಣರ ಬೆಂಬಲವನ್ನು ತನ್ನತ್ತ ಸೆಳೆಯಲುಎಸ್‌ಪಿ ಪ್ರಯತ್ನಿಸುತ್ತ ಇರುವುದಕ್ಕೆ ಪ್ರತಿಯಾಗಿ ಪರಶುರಾಮ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಆದರೆ ಇದನ್ನು ದಿನೇಶ್‌ ಶರ್ಮಾ ಅವರು ಅಲ್ಲಗಳೆದಿದ್ದಾರೆ. ‘ಅಖಿಲೇಶ್‌ ಯಾದವ್‌ ನಮ್ಮನ್ನು ಅನುಕರಣೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಕಾನ್ಪುರ ಮತ್ತಿತರ ಸ್ಥಳಗಳಲ್ಲಿ ಪರಶುರಾಮ ಮೂರ್ತಿಯನ್ನು ಬಿಜೆಪಿ ಪ್ರತಿಷ್ಠಾಪಿಸಿದೆ. ರಾಜ್ಯದ ಹಲವಾರು ಉದ್ಯಾನಗಳಿಗೆ ಪರಶುರಾಮನ ಹೆಸರನ್ನು ಇರಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.