ADVERTISEMENT

UP Results: ಯೋಗಿ ಆದಿತ್ಯನಾಥ್‌ಗೆ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 12:37 IST
Last Updated 10 ಮಾರ್ಚ್ 2022, 12:37 IST
ಯೋಗಿ ಆದಿತ್ಯನಾಥ್ - ಪಿಟಿಐ ಚಿತ್ರ
ಯೋಗಿ ಆದಿತ್ಯನಾಥ್ - ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ನಗರ ವಿಧಾನಸಭಾ ಕ್ಷೇತ್ರದಿಂದ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಭರ್ಜರಿ ಗೆಲುವು ದಾಖಲಿಸುವ ಸುಳಿವು ನೀಡಿದ್ದಾರೆ.

ಸಂಜೆ 6 ಗಂಟೆ ವೇಳೆಗೆ ಯೋಗಿ ಅವರಿಗೆ1,15,936ಮತಗಳು ದೊರೆತಿದ್ದರೆ, ಪ್ರತಿಸ್ಪರ್ಧಿ ಅಭ್ಯರ್ಥಿ, ಸಮಾಜವಾದಿ ಪಕ್ಷದ ಉಪೇಂದ್ರ ದತ್ ಶುಕ್ಲಾ ಅವರಿಗೆ 46,324 ಮತಗಳು ದೊರೆತಿವೆ. ಯೋಗಿ ಅವರ ಮತ ಹಂಚಿಕೆ ಪ್ರಮಾಣ ಶೇ 64.72ಆಗಿದ್ದರೆ, ಶುಕ್ಲಾ ಅವರ ಮತ ಹಂಚಿಕೆ ಪ್ರಮಾಣ ಶೇ 25.86 ಆಗಿದೆ.

ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಯೋಗಿ ಅವರು ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಗುರುವಾರ ಸಂಜೆ ವೇಳೆಗೆ ದೊರೆತ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಮೈತ್ರಿಕೂಟ 265ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ಸನಿಹದಲ್ಲಿದೆ. ಸಮಾಜವಾದಿ ಪಕ್ಷದ ಮೈತ್ರಿಕೂಟ 132ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಎಸ್‌ಪಿ, ಕಾಂಗ್ರೆಸ್ ಹಾಗೂ ಇತರರು ತಲಾ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಬಹುಮತ ಗಳಿಸಿ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಬಹುಮತ ಗಳಿಸಿದರೆ, 1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದಂತಾಗಲಿದೆ. ಯೋಗಿ ಅವರೇ ಮುಖ್ಯಮಂತ್ರಿಯಾದರೆ, ಅದೂ ಸಹ ದಾಖಲೆಯಾಗಲಿದೆ. 1955ರ ಬಳಿಕ ಇದೇ ಮೊದಲ ಬಾರಿಗೆ, ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿದ ಬಳಿಕ ಮತ್ತೆ ಅಧಿಕಾರ ಉಳಿಸಿಕೊಂಡ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.