ADVERTISEMENT

ಉತ್ತರಕ್ಕೆ ಕವಿದ ಮಂಜು: ಪ್ರತ್ಯೇಕ ಅಪಘಾತಗಳಲ್ಲಿ 23 ಮಂದಿಯ ಸಾವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 12:48 IST
Last Updated 16 ಡಿಸೆಂಬರ್ 2025, 12:48 IST
ಪ್ರಾತಿನಿಧಿಕ
ಪ್ರಾತಿನಿಧಿಕ   

ಲಖನೌ: ದಟ್ಟವಾದ ಮಂಜಿನಿಂದಾಗಿ ಉತ್ತರ ಪ್ರದೇಶದಾದ್ಯಂತ ಹಲವು ವಾಹನ ಅಪಘಾತಗಳು ಸಂಭವಿಸಿದ್ದು, 23 ಜನರು ಮೃತಪಟ್ಟು ನೂರಾರು ಜನರು ಗಾಯಗೊಂಡಿದ್ದಾರೆ.

ಮಥುರಾ ಜಿಲ್ಲೆಯ ಬಲದೇವ್ ಪ್ರದೇಶದ ಬಳಿಯ ದೆಹಲಿ–ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಅಪಘಾತದಿಂದಾಗಿ 13 ಜನರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.

ಮುಂಜಾನೆ 3.30ಕ್ಕೆ ದಟ್ಟವಾದ ಮಂಜಿನಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕನಿಷ್ಠ ಏಳು ಬಸ್‌ಗಳು ಮತ್ತು ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ನಂತರ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಮತ್ತು ಬಸ್‌ಗಳಲ್ಲಿದ್ದ ಜನರು ಸುಟ್ಟು ಕರಕಲಾಗಿದ್ದಾರೆ.

ADVERTISEMENT

ಮತ್ತೊಂದು ಘಟನೆಯಲ್ಲಿ, ಮಂಗಳವಾರ ಮುಂಜಾನೆ ಉನ್ನಾವೊ ಜಿಲ್ಲೆಯ ಬಾಂಗರಮವೂ ಪ್ರದೇಶದ ಲಖನೌ–ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನವೊಂದು ಬಂಡೆಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಸಂತ ಕಬೀರನಗರ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ.

ಮೀರತ್ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ ಹಿಂಡನ್ ನದಿಗೆ ವಾಹನ ಬಿದ್ದು ಇಬ್ಬರು ಪೊಲೀಸ್ ಕಾನ್ಸ್‌ಟೆಬಲ್‌ಗಳು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.