ADVERTISEMENT

ಉತ್ತರ ಪ್ರದೇಶದ ಕಾಲೇಜು ಕಟ್ಟಡ: ಕೈಯಲ್ಲಿ ತಳ್ಳಿದರೆ ಬೀಳುತ್ತದೆ ಗೋಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 20:05 IST
Last Updated 24 ಜೂನ್ 2022, 20:05 IST
ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್‌
ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್‌   

ಬೆಂಗಳೂರು: ‘ಉತ್ತರ ಪ್ರದೇಶ ಸರ್ಕಾರವು ನಿರ್ಮಿಸುತ್ತಿರುವ ಎಂಜಿನಿಯರಿಂಗ್‌ ಕಾಲೇಜಿನ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಸಿಮೆಂಟ್‌ ಬಳಸದೆಯೇ ಇಟ್ಟಿಗೆಗಳನ್ನು ಜೋಡಿಸಲಾಗಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋ‍ಪಿಸಿದ್ದಾರೆ. ಸಮಾಜವಾದಿ ಪಕ್ಷದ ಶಾಸಕರೊಬ್ಬರು ಬರಿಗೈನಿಂದ ತಳ್ಳಿದಾಗ, ಗೋಡೆ ಕುಸಿದು ಬೀಳುವ ವಿಡಿಯೊವನ್ನು ಅವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ರಾಣಿಗಂಜ್‌ನಲ್ಲಿ ನಿರ್ಮಿಸಲಾಗುತ್ತಿರುವ ಕಾಲೇಜು ಕಟ್ಟಡದ ಕಾಮಗಾರಿ ಪರಿಶೀಲನೆಗೆ ಸಮಾಜವಾದಿ ಪಕ್ಷದ ಸ್ಥಳೀಯ ಶಾಸಕ ಆರ್‌.ಕೆ.ವರ್ಮಾ ಅವರು ಹೋಗಿದ್ದರು. ನಿರ್ಮಾಣ ಹಂತದಲ್ಲಿರುವ ಕಟ್ಟಡದ ಗೋಡೆಯನ್ನು ಅವರು ಬರಿಗೈನಿಂದ ತಳ್ಳಿದ್ದಾರೆ. ಗೋಡೆ ಕುಸಿದು ಬಿದ್ದಿದೆ. ಕೆಳಗೆ ಬಿದ್ದ ನಂತರ ಎಲ್ಲಾ ಇಟ್ಟಿಗೆಗಳು ಬೇರೆಯಾಗಿವೆ. ಅಖಿಲೇಶ್ ಯಾದವ್ ಅವರು ಒಂದು ವಿಡಿಯೊವನ್ನು ಟ್ವೀಟ್ ಮಾಡಿದ್ದರೆ, ಬೇರೊಂದು ಗೋಡೆಯನ್ನು ಉರುಳಿಸುವ ವಿಡಿಯೊವನ್ನು ವರ್ಮಾ ಟ್ವೀಟ್ ಮಾಡಿದ್ದಾರೆ.

‘ಇಂತಹ ಕಳಪೆ ಕಾಮಗಾರಿಯಿಂದ ದೇಶದ ಯುವಕರ ಭವಿಷ್ಯವನ್ನು ಕಟ್ಟಲು ಸಾಧ್ಯವಿಲ್ಲ. ಇಲ್ಲಿ ಅವರ ಸಾವಿಗೆ ಸಿದ್ಧತೆ ನಡೆಸಲಾಗುತ್ತಿದೆ. ರಾಣಿಗಂಜ್‌ ಎಂಜಿನಿಯರಿಂಗ್ ಕಾಲೇಜಿನ ಕಳಪೆ ಕಾಮಗಾರಿಯು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಜಾಹೀರು ಮಾಡುತ್ತಿದೆ’ ಎಂದು ಆರ್‌.ಕೆ.ವರ್ಮಾ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಧಾನಗಳು ಅತ್ಯಂತ ವಿಶಿಷ್ಟವಾದವು’ ಎಂದು ಅಖಿಲೇಶ್ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.