ADVERTISEMENT

ಉತ್ತರ ಪ್ರದೇಶ: ಶಿಕ್ಷಕರ ಪರೀಕ್ಷೆಯ ಟಾಪರ್‌ಗೆ ಗೊತ್ತಿಲ್ಲ ರಾಷ್ಟ್ರಪತಿ ಹೆಸರು!

ಏಜೆನ್ಸೀಸ್
Published 7 ಜೂನ್ 2020, 15:07 IST
Last Updated 7 ಜೂನ್ 2020, 15:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕಗಳಿಸಿ, ಅಗ್ರಸ್ಥಾನದಲ್ಲಿರುವ ಧರ್ಮೇಂದ್ರ ಪಟೇಲ್‌ ಅವರಿಗೆ ಭಾರತದ ರಾಷ್ಟ್ರಪತಿ ಯಾರೆಂಬುದು ಗೊತ್ತಿಲ್ಲವಂತೆ!

ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದ ಧರ್ಮೇಂದ್ರ ಉತ್ತಮ ಜ್ಞಾನ ಹೊಂದಿದವರು ಎಂದು ತಿಳಿಯಲಾಗಿತ್ತು. ಆದರೆ, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ ಎಂದು ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೊಕ್ಕ ನಂತರ, ಧರ್ಮೇಂದ್ರ ಅವರ ಅಜ್ಞಾನ ಬಯಲಿಗೆ ಬಂದಿದೆ.

ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪಗಳು ಕೇಳಿ ಬಂದ ಕಾರಣ, ಪ್ರಯಾಗ್ ರಾಜ್‌ನ ಧರ್ಮೇಂದ್ರ ಪಟೇಲ್ ಸೇರಿದಂತೆ ಇತರ ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದರು.

ADVERTISEMENT

‘ಧರ್ಮೇಂದ್ರನಿಗೆ ದೇಶದ ರಾಷ್ಟ್ರಪತಿ ಯಾರು ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರ ಹೇಳಲು ಆತ ತಡವರಿಸಿದ್ದ. ಆತನ ವಿಚಾರಣೆ ನಡೆಸಿದಾಗ ಧರ್ಮೇಂದ್ರ, ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಇತರರ ಜತೆಗೂಡಿ ಅಕ್ರಮ ಎಸಗಿರುವುದು ಬೆಳಕಿಗೆ ಬಂತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಧರ್ಮೇಂದ್ರ ತನ್ನ ಡೈರಿಯಲ್ಲಿ ತನ್ನಂತೆಯೇ ಇರುವ ಇತರ ಅಭ್ಯರ್ಥಿಗಳ ಹೆಸರುಗಳನ್ನು ಬರೆದಿಟ್ಟಿರುವುದು ಪತ್ತೆಯಾಗಿದೆ. ಮೇಲ್ಜಾತಿಗೆ ಸೇರಿದ ಅರ್ಚನಾ ತಿವಾರಿ ಎನ್ನುವ ಅಭ್ಯರ್ಥಿಯೊಬ್ಬರ ಹೆಸರು ಒಬಿಸಿ ವಿದ್ಯಾರ್ಥಿಗಳ ಪಟ್ಟಿಯಲ್ಲಿದ್ದು, ಅವರೂ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರುವುದು ತಿಳಿದು ಬಂದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಕೇಳಲಾದ ನಾಲ್ಕು ಪ್ರಶ್ನೆಗಳು ತಪ್ಪಾಗಿವೆ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಕೆಲ ಅಭ್ಯರ್ಥಿಗಳು ಅಲಹಾಬಾದ್ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ಸದ್ಯಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಕೋರ್ಟ್ ಸ್ಥಗಿತಗೊಳಿಸಿದೆ.

ವಿಶೇಷವೆಂದರೆ ಉತ್ತರ ಪ್ರದೇಶ ಸರ್ಕಾರವು ಈಚೆಗಷ್ಟೇ 69 ಸಾವಿರ ಶಿಕ್ಷಕರ ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.