ADVERTISEMENT

ಉತ್ತರಾಖಂಡ | ಕಂದಕಕ್ಕೆ ಉರುಳಿದ ಬಸ್: ಸ್ಥಳದಲ್ಲೇ ಐವರ ಸಾವು, 23 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 9:08 IST
Last Updated 24 ನವೆಂಬರ್ 2025, 9:08 IST
   

ಡೆಹ್ರಾಡೂನ್‌: ಉತ್ತರಾಖಂಡದ ತೆಹ್ರಿ ಜಿಲ್ಲೆಯ ನರೇಂದ್ರ ನಗರ ಪ್ರದೇಶದ ಕುಂಜಾಪುರಿ-ಹಿಂಡೋಲಖಲ್ ಬಳಿ ಬಸ್‌ವೊಂದು 70 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 5 ಜನರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ನಲ್ಲಿ ಒಟ್ಟು 28 ಜನರಿದ್ದರು. ಗಾಯಾಳುಗಳನ್ನು ರಿಷಿಕೇಶದ ಏಮ್ಸ್‌ಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ತೆಹ್ರಿ ಜಿಲ್ಲೆಯ ನರೇಂದ್ರ ನಗರದ ಕುಂಜಾಪುರಿ ದೇವಸ್ಥಾನದ ಬಳಿ ನಡೆದ ಬಸ್ ಅಪಘಾತದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಘಟನಾ ಸ್ಥಳದಲ್ಲಿ ಜಿಲ್ಲಾಡಳಿತ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ರಿಷಿಕೇಶದ ಏಮ್ಸ್‌ ಸೇರಿದಂತೆ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ನಾನು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದೂ ಧಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.