ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿ ಪಟ್ಟಣದ ಮನೆಗಳು ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ಹಾನಿಗೊಂಡಿವೆ
–ಪಿಟಿಐ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ, ರುದ್ರ ಪ್ರಯಾಗ್ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಮೇಘಸ್ಫೋಟ ಸಂಭವಿಸಿದ್ದು, ಇದರಿಂದ ಭೂಕುಸಿತ ಉಂಟಾಗಿ ಹಲವರು ನಾಪತ್ತೆಯಾಗಿದ್ದಾರೆ.
ಚಮೋಲಿ ಜಿಲ್ಲೆಯ ಮೊಪಾಟಾ ಹಳ್ಳಿಯಲ್ಲಿ ಒಂದು ಮನೆ ಮತ್ತು ದನದ ಕೊಟ್ಟಿಗೆ ಮಣ್ಣಿನಡಿ ಸೇರಿದೆ. ದಂಪತಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ಚಮೋಲಿ ಡಿಸಿ ಸಂದೀಪ್ ತಿವಾರಿ ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಮತ್ತೊಂದು ದಂಪತಿಯನ್ನು ರಕ್ಷಿಸಲಾಗಿದೆ. ಅವರಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಹೆಚ್ಚಾದ ಮಳೆ ಮತ್ತು ಭೂಕುಸಿತದಿಂದಾಗಿ ರುದ್ರ ಪ್ರಯಾಗ್ ಜಿಲ್ಲೆಯ ಬಸುಕೇದಾರ್ ಪ್ರದೇಶದಲ್ಲಿ ಅರ್ಧ ಡಜನ್‌ನಷ್ಟು ಹಳ್ಳಿಗರ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಭೂಕುಸಿತ ಮತ್ತು ಪ್ರವಾಹದಿಂದಾಗಿ ಡುಂಗರ್ ಹಳ್ಳಿಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ.
ಜೌಲಾ-ಭದೇತ್ ಗ್ರಾಮದಲ್ಲೂ ಇದೇ ಪರಿಸ್ಥಿತಿ ವರದಿಯಾಗಿದ್ದು, ಪ್ರವಾಹದಲ್ಲಿ ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅದೇ ಪ್ರದೇಶದ ಸ್ಯೂರ್ ಗ್ರಾಮದಲ್ಲಿ ಒಂದು ಮನೆ ಹಾನಿಗೊಳಗಾಗಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಕೊಚ್ಚಿ ಹೋಗಿದೆ. ಬಡೇತ್, ಬಗದ್ದರ್ ಮತ್ತು ತಲ್ಜಮಾನಿ ಗ್ರಾಮಗಳ ಎರಡೂ ಬದಿಗಳಲ್ಲಿನ ಕಂದರಗಳಲ್ಲಿ ಪ್ರವಾಹ ಉಂಟಾಗಿದೆ.
ರುದ್ರಪ್ರಯಾಗ ಜಿಲ್ಲೆಯ ತಹಸಿಲ್ ಬಸುಕೆದಾರ್ ಪ್ರದೇಶದ ಬದೇತ್ ಡುಂಗಾರ್ ಮತ್ತು ಚಮೋಲಿ ಜಿಲ್ಲೆಯ ದೇವಲ್ ಪ್ರದೇಶದಲ್ಲಿ ಮೇಘಸ್ಫೋಟದ ಪರಿಣಾಮವಾಗಿ ಅವಶೇಷಗಳು ಬಿದ್ದ ಕಾರಣ ಕೆಲವು ಕುಟುಂಬಗಳು ಸಿಲುಕಿಕೊಂಡಿರುವ ಬಗ್ಗೆ ಸುದ್ದಿ ಬಂದಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ವಿಪತ್ತು ನಿರ್ವಹಣಾ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.