ಉತ್ತರಾಖಂಡದಲ್ಲಿ ಮಳೆ ಅವಾಂತರ ( ಸಂಗ್ರಹ ಚಿತ್ರ)
ಉತ್ತರಕಾಶಿ: ಪ್ರವಾಹ ಪೀಡಿತ ಉತ್ತರಕಾಶಿಯ ಧರಾಲಿಯಲ್ಲಿ ಭಾರಿ ಮಳೆಯಿಂದಾಗಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಮೋರಾ, ಡೆಹ್ರಾಡೂನ್, ಹರಿದ್ವಾರ, ನೈನಿತಾಲ್, ಪೌರಿ ಮತ್ತು ಉಧಮ್ ಸಿಂಗ್ ನಗರ ಸೇರಿದಂತೆ ಕೆಲವೆಡೆ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ 'ರೆಡ್' ಅಲರ್ಟ್ ಘೋಷಿಸಿದೆ .
ಪ್ರತಿಕೂಲ ಹವಾಮಾನ ಪರಿಣಾಮದಿಂದಾಗಿ ನಾಪತ್ತೆಯಾದ ಜನರ ಶೋಧ ಕಾರ್ಯಾಚರಣೆ ನಿಧಾನಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ 42 ಮಂದಿ ನಾಪತ್ತೆಯಾಗಿದ್ದು, ಈ ಪೈಕಿ ಧರಾಲಿ ಗ್ರಾಮದ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಮೃತನ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ.
ಹೆಲಿಕಾಪ್ಟರ್ ಬಳಸಿಕೊಂಡು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ಮೂಲಕ ಹೊರಗಿನವರು, ಸ್ಥಳೀಯರು ಸೇರಿದಂತೆ ಒಟ್ಟು 1,278 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
ಕಾಣೆಯಾದ 42 ಜನರ ಪೈಕಿ ಒಂಬತ್ತು ಮಂದಿ ಸೇನಾ ಸಿಬ್ಬಂದಿ, ಧರಾಲಿ ಗ್ರಾಮದ ಎಂಟು ಜನರು, ಹತ್ತಿರದ ಪ್ರದೇಶಗಳ ಐವರು, ತೆಹ್ರಿ ಜಿಲ್ಲೆಯ ಒಬ್ಬರು, ಬಿಹಾರದ 13 ಮತ್ತು ಉತ್ತರ ಪ್ರದೇಶದ ಆರು ಜನರು ಸೇರಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.
ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯಿಂದಾಗಿ ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಧರಾಲಿ ಗ್ರಾಮದ ಅರ್ಧದಷ್ಟು ಭಾಗ ಮುಳುಗಿದೆ.
ಆಗಸ್ಟ್ 13 ರಿಂದ 15ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಡೆಹ್ರಾಡೂನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಎಂಧು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.