ADVERTISEMENT

ಉತ್ತರಾಖಂಡ: ಬೆಟ್ಟದ ಮೇಲೆ ಸ್ವಘೋಷಿತ ದೇವಮಾನವನಿಂದ ದೇವಸ್ಥಾನ ನಿರ್ಮಾಣ– ವಿವಾದ

ಬಾಬಾ ಚೈತನ್ಯ ಆಕಾಶ್ ಅಲಿಯಾಸ್ ಆದಿತ್ಯ ಕೈಲಾಸ್ ಎನ್ನುವ ಸ್ವಘೋಷಿತ ದೇವಮಾನವ ದೇವಿ ಕುಂಡ ಸರೋವರದ ಬಳಿ ದೇವಸ್ಥಾನ ನಿರ್ಮಾಣ

ಪಿಟಿಐ
Published 16 ಜುಲೈ 2024, 9:44 IST
Last Updated 16 ಜುಲೈ 2024, 9:44 IST
ಕಾಯಕಲ್ಪಕ್ಕೆ ಕಾದಿರುವ ಮುಂಡರಗಿ ತಾಲ್ಲೂಕಿನ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನ
ಕಾಯಕಲ್ಪಕ್ಕೆ ಕಾದಿರುವ ಮುಂಡರಗಿ ತಾಲ್ಲೂಕಿನ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನ   

ಡೆಹರಾಡೂನ್: ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯ ಸುಧರ್ದುಂಗಾ ನದಿ ಕಣಿವೆ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದ ಬೆಟ್ಟದ ಮೇಲೆ ಸ್ವಘೋಷಿತ ದೇವಮಾನವನೊಬ್ಬ ದೇವಸ್ಥಾನವನ್ನು ನಿರ್ಮಿಸಿರುವುದು ವಿವಾದದ ಸ್ವರೂಪ ಪಡೆದಿದೆ.

ಬಾಬಾ ಚೈತನ್ಯ ಆಕಾಶ್ ಅಲಿಯಾಸ್ ಆದಿತ್ಯ ಕೈಲಾಸ್ ಎನ್ನುವ ಸ್ವಘೋಷಿತ ದೇವಮಾನವ ದೇವಿ ಕುಂಡ ಸರೋವರದ ಬಳಿಯ ಬೆಟ್ಟದ ಮೇಲೆ ಕಟ್ಟಿಗೆ ಹಾಗೂ ಕಲ್ಲು ಬಳಸಿ ಪುಟ್ಟ ದೇವಸ್ಥಾನ ನಿರ್ಮಿಸಿದ್ದಾರೆ. ಅವರ ವಿರುದ್ಧ ಸ್ಥಳೀಯರು ಬಾಗೇಶ್ವರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಅನುರಾಗ್ ಪಾಲ್ ಅವರು ದೂರಿನ ಬಗ್ಗೆ ತನಿಖೆ ನಡೆಸಲು ಎಸ್‌.ಪಿಗೆ ಸೂಚಿಸಿದ್ದಾರೆ.

ADVERTISEMENT

‘ದೇವರಿಂದಲೇ ನನಗೆ ಸೂಚನೆ ಬಂದಿದ್ದು ಹಾಗಾಗಿ ನಾನು ದೇವಸ್ಥಾನ ನಿರ್ಮಿಸಿದ್ದೇನೆ. ಸ್ಥಳೀಯರು ನನಗೆ ಬೆಂಬಲ ನೀಡಬೇಕು’ ಎಂದು ಬಾಬಾ ಚೈತನ್ಯ ಸ್ಥಳೀಯರ ಬಳಿ ಕೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನ ನಿರ್ಮಿಸಿರುವ ಜಾಗ ಪರಿಸರ ಸೂಕ್ಷ್ಮ ವಲಯ ಅಷ್ಟೇ ಅಲ್ಲದೇ ಅಪಾಯಕಾರಿಯೂ ಆಗಿದ್ದು ಮುಂಗಾರು ಸಮಯದಲ್ಲಿ ಪ್ರವೇಶ ನಿಷೇಧಿಸಲಾಗಿರುತ್ತದೆ.

ದೇವಿ ಕುಂಡವನ್ನು ಸ್ಥಳೀಯರು ಪವಿತ್ರ ಸರೋವರ ಎಂದು ಪೂಜಿಸುವ ರೂಡಿಯಿದ್ದು, ಅದರ ಬಳಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸಿರುವುದಲ್ಲದೇ ಬಾಬಾ ಚೈತನ್ಯ ಅವರು ದೇವಿ ಕುಂಡದಲ್ಲಿ ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

‘ದೇವಸ್ಥಾನ ನಿರ್ಮಿಸಿರುವ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಬಾಬಾ ಚೈತನ್ಯ ಎನ್ನುವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ದೂರು ನೀಡಿದ್ದು ಪ್ರಕರಣವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು’ ಎಂದು ಬಾಗೇಶ್ವರ್ ಎಸ್‌.ಪಿ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ.

ನಿರ್ಮಿಸಿರುವ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಅನುಮತಿ ಕೊಡಿಸಬೇಕು ಎಂದು ಬಾಬಾ ಚೈತನ್ಯ ಕೆಲ ರಾಜಕಾರಣಿಗಳ ಹಿಂದೆ ಬಿಂದಿದ್ದಾರೆ ಎಂದು ಸ್ಥಳೀಯರು ಪೊಲೀಸರ ಬಳಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.