ಸಾಂದರ್ಭಿಕ-ಚಿತ್ರ
– ಎ.ಐ ಚಿತ್ರ
ಡೆಹ್ರಾಡೂನ್: ಬೇರೆ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ವಾಹನಗಳಿಗೆ ಡಿಸೆಂಬರ್‌ನಿಂದ ಹಸಿರು ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ ಹಾಗೂ ರಾಜ್ಯದಲ್ಲಿ ಸ್ವಚ್ಚತೆಯನ್ನ ಪ್ರೋತ್ಸಾಹಿಸಲು ಈ ನಿರ್ಧಾರ ತಾಳಲಾಗಿದೆ. ಡಿಸೆಂಬರ್‌ನಿಂದ ತೆರಿಗೆ ವಸೂಲಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದ ಗಡಿಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತು ಹಿಡಿದು ಕ್ಯಾಮೆರಾಗಳನ್ನು ಅಳವಡಿಸಿ. ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ಸೆರೆ ಹಿಡಿಯಲಾಗುವುದು ಎಂದು ರಾಜ್ಯದ ಹೆಚ್ಚುವರಿ ಸಾರಿಗೆ ಆಯುಕ್ತ ಸನತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸದ್ಯ 16 ಕ್ಯಾಮೆರಾಗಳನ್ನು ಗಡಿ ಭಾಗಗಳಲ್ಲಿ ಅಳವಡಿಸಲಾಗಿದ್ದು, ಇದನ್ನು 37ಕ್ಕೆ ಏರಿಸಲಾಗುವುದು. ಹಸಿರು ಸುಂಕ ವಸೂಲಿಗೆ ಕಂಪನಿಯೊಂದಕ್ಕೆ ಸಾರಿಗೆ ಇಲಾಖೆ ಅಧಿಕಾರ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ಕ್ಯಾಮೆರಾಗಳು ಸಂಗ್ರಹಿಸಿದ ದತ್ತಾಂಶವು ಸಾಫ್ಟ್‌ವೇರ್ ಮೂಲಕ ಕಂಪನಿಗೆ ಕಳುಹಿಸಲಾಗುತ್ತದೆ. ಅಲ್ಲಿ ಉತ್ತರಾಖಂಡ ನೋಂದಾಯಿತ, ಸರ್ಕಾರಿ ಹಾಗೂ ದ್ವಿಚಕ್ರ ವಾಹನಗಳನ್ನು ಪ್ರತ್ಯೇಕಿಸಿ ಅದನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ಗೆ ಕಳುಹಿಸಿಕೊಡಲಿದೆ ಎಂದು ಅವರು ಹೇಳಿದ್ದಾರೆ.
ವಾಹನದ ಮಾಲೀಕರ ವ್ಯಾಲೆಟ್ ಸಂಖ್ಯೆಯನ್ನು ಶೋಧಿಸಿ, ಸ್ವಯಂಚಾಲಿತವಾಗಿ ಹಣ ಕಡಿತಗೊಳಿಸಿ ಅದನ್ನು ಇಲಾಖೆಯ ಖಾತೆಗೆ ಠೇವಣಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಣ್ಣ ವಾಹನಗಳಿಗೆ ₹ 80, ಸಣ್ಣ ಸರಕು ವಾಹನಗಳಿಗೆ ₹ 250, ಬಸ್‌ಗಳಿಗೆ ₹ 140 ಹಾಗೂ ಟ್ರಕ್‌ಗಳಿಗೆ ಅವುಗಳ ತೂಕದ ಅನುಸಾರ ₹ 120–₹ 700ರ ವರೆಗೆ ತೆರಿಗೆ ವಿಧಿಸಲಾಗುತ್ತದೆ.