ADVERTISEMENT

ಬದರಿನಾಥ ಸುಂದರೀಕರಣಕ್ಕೆ ಮಾಸ್ಟರ್‌ ಪ್ಲಾನ್‌

ಪ್ರಧಾನಮಂತ್ರಿ ಕಚೇರಿಯಲ್ಲಿ ಬುಧವಾರ ಹೊಸ ಯೋಜನೆಯ ಪ್ರಸ್ತಾವ ಮಂಡನೆ

ಪಿಟಿಐ
Published 8 ಸೆಪ್ಟೆಂಬರ್ 2020, 10:31 IST
Last Updated 8 ಸೆಪ್ಟೆಂಬರ್ 2020, 10:31 IST
ಬದರಿನಾಥ ದೇವಾಲಯ (ಸಂಗ್ರಹ ಚಿತ್ರ)
ಬದರಿನಾಥ ದೇವಾಲಯ (ಸಂಗ್ರಹ ಚಿತ್ರ)   

ಡೆಹ್ರಾಡೂನ್: ಪ್ರಸಿದ್ಧ ಪ್ರವಾಸಿ ತಾಣ ಬದರಿನಾಥ ಕ್ಷೇತ್ರವನ್ನು ಇನ್ನಷ್ಟು ಚಂದಗಾಣಿಸುವುದುಮತ್ತು ಭಕ್ತರ ಅನುಕೂಲಕ್ಕಾಗಿ ಹಿಮಾಲಯದ ತಪ್ಪಲಿನಲ್ಲಿರುವ ದೇವಾಲಯಗಳ ಸುತ್ತಮುತ್ತ ಮೂಲ ಸೌಲಭ್ಯಗಳನ್ನು ಹೆಚ್ಚಿಸುವ ಸಂಬಂಧ ತಯಾರಿಸಿರುವ ₹424 ಕೋಟಿ ಮೊತ್ತದ ಬೃಹತ್ ಯೋಜನೆಯನ್ನು (‘ಮಾಸ್ಟರ್‌ ಪ್ಲಾನ್‘) ಬುಧವಾರ ಪ್ರಧಾನಿ ಕಚೇರಿಯಲ್ಲಿ ಮಂಡಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಕೇದಾರನಾಥದಲ್ಲಿ ಮೂಲಸೌಲಭ್ಯ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಪ್ರಧಾನಿ ಮೋದಿಯವರೇ ಈ ಯೋಜನೆಗಳ ಪ್ರಗತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರ ಸೂಚನೆಯ ಮೇರೆಗೆ ಕೇದಾರ್‌ಪುರಿ ಪುನರ್‌‌ ನಿರ್ಮಾಣದ ಮಾದರಿಯಲ್ಲೇ ಬದರಿನಾಥ ಕ್ಷೇತ್ರದ ಸೌಂದರ್ಯೀಕರಣವೊಳಿಸುವ ಕುರಿತ ಅಂಶಗಳು ಈ ಮಾಸ್ಟರ್‌ಪ್ಲಾನ್‌ನಲ್ಲಿ ಸೇರಿಸಲಾಗಿದೆ.

ಉತ್ತರಖಂಡ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ದಿಲೀಪ್ ಜವಾಲ್ಕರ್ ಈ ಹೊಸ ಮಾಸ್ಟರ್ ಪ್ಲಾನ್‌ ಅನ್ನು ಬುಧವಾರ ಪ್ರಧಾನಮಂತ್ರಿಯವರ ಕಚೇರಿಯಲ್ಲಿ, ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಅವರ ಸಮ್ಮುಖದಲ್ಲಿ ಪ್ರಸ್ತುತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ,ಮಾಸ್ಟರ್‌ ಪ್ಲಾನ್‌ಗೆ ಅಂತಿಮ ಸ್ಪರ್ಶ ನೀಡಿದ ನಂತರ ಮಾತನಾಡಿದ ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ ಎಸ್ ಭಡೌರಿಯಾ, ‘ಬದರಿನಾಥ, ಕೇದಾರನಾಥ ದೇವಾಲಯಗಳ ಸುತ್ತ ನಡೆಯುತ್ತಿರುವ ಅಭಿವೃದ್ಧಿಕಾರ್ಯಗಳು ಮೂರು ಹಂತಗಳಲ್ಲಿ ನಡೆಯುತ್ತಿವೆ‘ಎಂದು ಹೇಳಿದರು.

ಮಾಸ್ಟರ್ ಪ್ಲ್ಯಾನ್ ಅನುಷ್ಠಾನದ ಮೊದಲ ಹಂತದಲ್ಲಿ ದೇವಾಲಯದ ಸಮೀಪವಿರುವ ಶೇಶ್ ನೇತ್ರ ಮತ್ತು ಬದ್ರಿಶ್ ಸರೋವರಗಳ ಸೌಂದರ್ಯೀಕರಣವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಎರಡನೆಯ ಹಂತದಲ್ಲಿ ದೇವಾಲಯ ಮತ್ತು ಅದರ ಸಮೀಪವಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇವಾಲಯವನ್ನು ನೇರವಾಗಿ ಸಂಪರ್ಕಿಸುವ ಮಾರ್ಗವನ್ನು ಶೇಶ್ ನೇತ್ರ ಸರೋವರವನ್ನು ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ‘ ಎಂದು ಭಡೌರಿಯಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.