ADVERTISEMENT

ಉತ್ತರಾಖಂಡ ಮದರಸಾದಲ್ಲಿ NCERT ಪಠ್ಯಕ್ರಮ: ಸಂಸ್ಕ್ರತ ಅಧ್ಯಯನಕ್ಕೂ ಅವಕಾಶ

ಪಿಟಿಐ
Published 18 ಜನವರಿ 2025, 15:37 IST
Last Updated 18 ಜನವರಿ 2025, 15:37 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಡೆಹ್ರಾಡೂನ್‌: ಎನ್‌ಸಿಇಆರ್‌ಟಿ ಪಠ್ಯಕ್ರಮ ಹೊಂದಿರುವ ರಾಜ್ಯದ ಮೊದಲ ಆಧುನಿಕ ಮದರಾಸವನ್ನು ಉತ್ತರಾಖಂಡ ವಕ್ಫ್‌ ಬೋರ್ಡ್‌ ಸ್ಥಾಪಿಸಿದೆ. ಇಲ್ಲಿ ಅರೇಬಿಕ್ ಜೊತೆಗೆ ಸಂಸ್ಕೃತವನ್ನು ಐಚ್ಚಿಕ ವಿಷಯವಾಗಿ ಅಧ್ಯಯನ ಮಾಡುವ ಅವಕಾಶವನ್ನೂ ನೀಡಲಾಗಿದೆ. 

‘₹50 ಲಕ್ಷ ವೆಚ್ಚದಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಆಧುನಿಕ ಮದರಾಸವನ್ನು ಅಭಿವೃದ್ಧಿಗೊಳಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಮಾರ್ಚ್‌ನಿಂದ ಇಲ್ಲಿ ತರಗತಿಗಳು ಆರಂಭವಾಗಲಿವೆ’ ಎಂದು ರಾಜ್ಯ ವಕ್ಫ್‌ ಬೋರ್ಡ್‌ ಅಧ್ಯಕ್ಷ ಶದಾಬ್‌ ಶಾಮ್ಸ್ ತಿಳಿಸಿದರು.

ಡೆಹ್ರಾಡೂನ್‌ನ ಮುಸ್ಲಿಂ ಕಾಲೊನಿಯಲ್ಲಿ 10 ಮದರಾಸಗಳಿವೆ. ಅವುಗಳಲ್ಲಿ ಈ ಮದರಾಸವು ಅತ್ಯಾಧುನಿಕ ತರಗತಿ, ಪೀಠೋಪಕರಣ, ಕಂಪ್ಯೂಟರ್ ಮತ್ತು ಸ್ಮಾರ್ಟ್‌ ಬೋರ್ಡ್‌ಗಳನ್ನು ಹೊಂದಿದೆ. ಹತ್ತಿರದ ಮದರಾಸದಲ್ಲಿನ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತರಲಾಗುವುದು ಎಂದು ಹೇಳಿದರು. 

ADVERTISEMENT

ಈ ವರ್ಷದೊಳಗೆ ರಾಜ್ಯದಲ್ಲಿನ 8 ರಿಂದ 10 ಮದರಾಸಗಳನ್ನು ಅಭಿವೃದ್ಧಿಪಡಿಸಲು ವಕ್ಫ್‌ ಬೋರ್ಡ್‌ ಯೋಜನೆ ರೂಪಿಸಿದೆ. ಸಣ್ಣ ಸಣ್ಣ ಮದರಸಾಗಳನ್ನು ಅವುಗಳೊಂದಿಗೆ ವಿಲೀನಗೊಳಿಸಲಾಗುತ್ತದೆ. 

ಇಲ್ಲಿನ ವಿದ್ಯಾರ್ಥಿಗಳು ಬೆಳಿಗ್ಗೆ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಸಾಮಾನ್ಯ ವಿಷಯಗಳನ್ನು ಅಧ್ಯಯನ ಮಾಡಲಿದ್ದಾರೆ. ಸಂಜೆ ಧರ್ಮಾಧರಿತ ಶಿಕ್ಷಣವನ್ನು ಪಡೆಯಲಿದ್ದಾರೆ. ಕುರಾನ್‌, ಪ್ರವಾದಿ ಮೊಹಮ್ಮದರ ಪ್ರವಚನಗಳು ಅಥವಾ ರಾಮನಿಗೆ ಸಂಬಂಧಿಸಿದ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಉಚಿತ ಶಿಕ್ಷಣ, ಸಮವಸ್ತ್ರ ಮತ್ತು ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ಶಾಮ್ಸ್‌ ಅವರು ಹೇಳಿದರು. 

ಎಲ್ಲ ಮದರಸಾಗಳನ್ನೂ ವಕ್ಫ್‌ ಮಂಡಳಿ ನಿರ್ವಹಣೆಯಡಿಯಲ್ಲಿ ತರುವ ಕುರಿತು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.