
ರಕ್ಷಣಾ ಕಾರ್ಯಾಚರಣೆ
ಕೃಪೆ: ಪಿಟಿಐ
ಡೆಹ್ರಾಡೂನ್: ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ನಾಲ್ಕು ತಿಂಗಳು ಕಳೆದರೂ, 147 ಜನರ ಮೃತದೇಹಗಳು ಅವಶೇಷಗಳ ಅಡಿಯಲ್ಲೇ ಸಿಲುಕಿವೆ. ಅವುಗಳನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ನಾಯಕ, ನಿವೃತ್ತ ಕರ್ನಲ್ ಅಜಯ್ ಕೊಠಿಯಾಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಡೆಹ್ರಾಡೂನ್‌ನಲ್ಲಿ ಆಯೋಜಿಸಿದ್ದ 'ವಿಪತ್ತು ನಿರ್ವಹಣೆ ಕುರಿತ ವಿಶ್ವ ಶೃಂಗಸಭೆ'ಯಲ್ಲಿ ಮಾತನಾಡಿರುವ ಅಜಯ್, 'ಸೇನೆಯು, ಹರ್ಷಿಲ್‌ನಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 10 ಯೋಧರ ಪೈಕಿ ಏಳು ಮಂದಿಯನ್ನು ರಕ್ಷಿಸಲು ಸಾಧ್ಯವಾಗಿದೆ ಎಂದ ಮೇಲೆ, ಧರಾಲಿಯಲ್ಲಿ ಸಿಲುಕಿದ್ದ 147 ಜನರನ್ನು ರಕ್ಷಿಸಲು ಆಗಲಿಲ್ಲವೇಕೆ?' ಎಂದು ಪ್ರಶ್ನಿಸಿದ್ದಾರೆ.
'ವಿಪತ್ತು ಸಂಭವಿಸಿ ನಾಲ್ಕು ತಿಂಗಳು ಕಳೆದರೂ ಧರಾಲಿ ಛಿದ್ರವಾಗಿಯೇ ಉಳಿದಿದೆ' ಎಂದು ಬೇಸರ ವ್ಯಕ್ತಪಡಿಸಿರುವ ಬಿಜೆಪಿ ನಾಯಕ, 'ದುರಂತದ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಲು ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳುವ ಕೆಲಸವಾಗಿಲ್ಲ. ಅದರ ಬದಲಾಗಿ, ವಿಪತ್ತು ನಿರ್ವಹಣಾ ಅಧಿಕಾರಿಗಳು, ಭೂ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಇಂತಹ ದುರಂತಗಳನ್ನು ತಪ್ಪಿಸಲು ನೆಪಗಳನ್ನು ಹುಡುಕುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ಧರಾಲಿಯಲ್ಲಿ ಇದೇ ವರ್ಷ ಆಗಸ್ಟ್ 5ರಂದು ಭಾರಿ ಸಂಭವಿಸಿದ ಮೇಘ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದ ಅಪಾರ ಹಾನಿ ಸಂಭವಿಸಿತ್ತು.
ಅಜಯ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, 'ಕನರ್ಲ್ ಅಜಯ್ ಅವರು ಕೇದಾರನಾಥ ದುರಂತದ ವೇಳೆ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದರು. ಅವರು ನೀಡಿರುವ ಹೇಳಿಕೆಯು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಾಮರ್ಥ್ಯವನ್ನು ಬಯಲು ಮಾಡಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರತಿಕ್ರಿಯೆ ನೀಡಬೇಕು' ಎಂದು ಒತ್ತಾಯಿಸಿದೆ.
'ಅಜಯ್ ಅವರ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ರಾಜ್ಯ ಬಿಜೆಪಿ ಘಟಕವೂ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.