ನವದೆಹಲಿ: ವಡೋದರಾದ ಮಹಿಸಾಗರ ನಗರದಿಗೆ ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ಸೇತುವೆ ಕುಸಿದ ಪರಿಣಾಮ ಮಗು ಸೇರಿ ಒಂಬತ್ತು ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಇಂದು (ಬುಧವಾರ) ಬೆಳಿಗ್ಗೆ ಈ ಘಟನೆ ನಡೆದಿದೆ.
ಈ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಘಟನೆ ಅತ್ಯಂತ ನೋವುಂಟು ಮಾಡಿದೆ.ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬವರು ಈ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಕೆಯಾಗಲಿ ಎಂದು ಮುರ್ಮು ಹಾರೈಸಿದ್ದಾರೆ.
ಈ ಘಟನೆಯು ಬುಧವಾರ ಬೆಳಿಗ್ಗೆ 7.30ಕ್ಕೆ ಸಂಭವಿಸಿದೆ. ಎರಡು ಪಿಲ್ಲರ್ ನಡುವಿನ ಸ್ಲಾಬ್ ಕುಸಿದಿದೆ ಎರಡು ಟ್ರಕ್ ಮತ್ತು ಒಂದು ವ್ಯಾನ್ ನದಿಗೆ ಬಿದ್ದಿವೆ ಎಂದು ಪೊಲೀಸ್ ಇನ್‌ಸ್ಟೆಕ್ಟರ್ ವಿಜಯ್ ಚರಣ್ ತಿಳಿಸಿದ್ದಾರೆ.
ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ ‘ಗಂಭೀರ ಸೇತುವೆ’ ಮಧ್ಯದ ಭಾಗ ಕುಸಿದಿದೆ. ಇದರ ಪರಿಣಾಮ ವಾಹನಗಳು ನೀರಿಗೆ ಬಿದ್ದು ಹಲವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಋಷಿಕೇಶ ಪಟೇಲ್ ತಿಳಿಸಿದ್ದಾರೆ.
‘ಈ ಸೇತುವೆಯು 1985ರಲ್ಲಿ ನಿರ್ಮಾಣಗೊಂಡಿತ್ತು. ಇದರ ನಿರ್ವಹಣೆಯೂ ಆಯಾ ಕಾಲಕ್ಕೆ ನಡೆದಿದೆ. ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.