ADVERTISEMENT

ಸೀತೆಯಿಂದ ದೂರವಾದ ರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ಕವಿ ವೈರಮುತ್ತು ವಿವಾದ

ಪಿಟಿಐ
Published 13 ಆಗಸ್ಟ್ 2025, 5:07 IST
Last Updated 13 ಆಗಸ್ಟ್ 2025, 5:07 IST
<div class="paragraphs"><p>ವೈರಮುತ್ತು </p></div>

ವೈರಮುತ್ತು

   

ಚಿತ್ರ ಕೃಪೆ: ಎಕ್ಸ್‌

ಚೆನ್ನೈ: ‘ಸೀತೆಯಿಂದ ದೂರವಾದ ಬಳಿಕ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ’ ಎಂದು ತಮಿಳಿನ ಖ್ಯಾತ ಕವಿ ವೈರಮುತ್ತು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

ADVERTISEMENT

ವೈರಮುತ್ತು ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಖಂಡಿಸಿದ್ದು, ‘ಅಸಭ್ಯ ಹೇಳಿಕೆ’ ಎಂದು ಪ್ರತಿಕ್ರಿಯಿಸಿದೆ.

ಇತ್ತೀಚೆಗೆ ವೈರಮುತ್ತು, ರಾಮಾಯಣವನ್ನು ತಮಿಳಿನಲ್ಲಿ ಬರೆದ ಪ್ರಾಚೀನ ಕವಿ ಕಂಬನ್‌ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಆ ವೇಳೆ ಮಾತನಾಡಿದ್ದ ಅವರು, ಶ್ರೀರಾಮನ ಕುರಿತಾದ ಹೇಳಿಕೆಯನ್ನು ನೀಡಿದ್ದರು.

ಸುಗ್ರೀವನ ಜತೆ ಕಾದಾಡಿದ್ದ ಕಿಷ್ಕಿಂದೆಯ ರಾಜ ವಾಲಿಯನ್ನು ರಾಮನು ಮರೆಯಲ್ಲಿ ನಿಂತು ಕೊಂದಿದ್ದನ್ನು ಉಲ್ಲೇಖಿಸಿ, ‘ಸೀತೆಯಿಂದ ದೂರವಾಗಿದ್ದ ರಾಮ, ತಾನು ಏನು ಮಾಡುತ್ತಿದ್ದೇನೆ ಎಂಬ ಪರಿಜ್ಞಾನವನ್ನೇ ಕಳೆದುಕೊಂಡಿದ್ದ. ಅಂತಹ ಸ್ಥಿತಿಯಲ್ಲಿ ಮಾಡಿದ ಅಪರಾಧಗಳನ್ನು ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 84 ರ ಅಡಿಯಲ್ಲಿ ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ. ವಾಲ್ಮೀಕಿ, ವಾಲಿ ಅಥವಾ ಈ ಜಗತ್ತೇ ರಾಮನನ್ನು ಕ್ಷಮಿಸಲು ಸಿದ್ಧವಿರಲಿಲ್ಲ. ಆದರೆ, ಕಂಬ ರಾಮಾಯಣದಲ್ಲಿ ರಾಮನನ್ನು ಕ್ಷಮಿಸಲಾಗಿದೆ. ರಾಮನಿಗೆ ಕ್ಷಮಾದಾನ ನೀಡಿದ್ದಕ್ಕೆ ಕಂಬನ್‌ ಅವರನ್ನು ದೇವರೆಂದು, ರಾಮನನ್ನು ಮಾನವನೆಂದು ಗುರುತಿಸಲಾಗಿದೆ’ ಎಂದು ವೈರಮುತ್ತು ಹೇಳಿದ್ದರು.

ಈ ಹೇಳಿಕೆಯನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ನಾಯಕ ನಾರಾಯಣ ತಿರುಪತಿ, ವೈರಮುತ್ತು ಅವರನ್ನು ‘ಮೂರ್ಖ’ ಎಂದು ಕರೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು,‘ ವೈರಮುತ್ತು ಅವರನ್ನು ಮೂರ್ಖ ಎಂದು ಕರೆಯಲು ನನಗೆ ಹಿಂಜರಿಕೆಯಿಲ್ಲ. ಸ್ವಂತ ಸಹೋದರನ ಹೆಂಡತಿಯನ್ನು ತನ್ನ ಹೆಂಡತಿ ಎಂದು ವಾಲಿ ಹೇಳಿದ್ದಕ್ಕಾಗಿ ರಾಮ ಹತ್ಯೆ ಮಾಡಿದ. ಈ ಮೂರ್ಖರು ತಾವು ದೇವರಿಗಿಂತ ಮೇಲಿದ್ದೇವೆ ಎನ್ನುವ ರೀತಿಯಲ್ಲಿ ಎಲ್ಲವನ್ನೂ ಸಮರ್ಥಿಸಿಕೊಳ್ಳುತ್ತಾರೆ. ಕೆಟ್ಟ ಯೋಚನೆ ಹೊಂದಿದ್ದ ವಾಲಿಯನ್ನು ರಾಮನು ಶಿಕ್ಷಿಸಿರುವುದು ಸರಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.