
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿನ ಶ್ರೀಮಾತಾ ವೈಷ್ಣೋದೇವಿ ವೈದ್ಯಕೀಯ ಎಕ್ಸ್‌ಲೆನ್ಸ್ ಸಂಸ್ಥೆಗೆ ನೀಡಲಾಗಿದ್ದ ಅನುಮತಿ ಪತ್ರವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹಿಂತೆಗೆದುಕೊಂಡಿದೆ.
ಈ ವೈದ್ಯಕೀಯ ಶಿಕ್ಷಣ ಸಂಸ್ಥೆಯು ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ (ಎಂಎಆರ್‌ಬಿ) ಕನಿಷ್ಠ ಮಾನದಂಡಗಳನ್ನು ಪಾಲಿಸದ ಕಾರಣ ಅನುಮತಿ ಹಿಂದಕ್ಕೆ ಪಡೆಯಲಾಗಿದೆ ಎಂದು ಅದು ತಿಳಿಸಿದೆ.
2025–26ನೇ ಸಾಲಿನ ಕೌನ್ಸೆಲಿಂಗ್‌ನಲ್ಲಿ ಈ ಕಾಲೇಜಿಗೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಜಮ್ಮು ಮತ್ತು ಕಾಶ್ಮೀರದ ಇತರ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು. ಇವುಗಳನ್ನು ಕೇಂದ್ರಾಡಳಿತ ಪ್ರದೇಶದ ಸಕ್ಷಮ ಪ್ರಾಧಿಕಾರದ ‘ಸೂಪರ್‌ನ್ಯೂಮರರಿ ಸೀಟು’ಗಳಾಗಿ ಪರಿಗಣಿಸಲಾಗುವುದು ಎಂದು ಅದು ಆದೇಶದಲ್ಲಿ ಹೇಳಿದೆ.
ಅನಿರೀಕ್ಷಿತ ತಪಾಸಣೆ ನಡೆಸಿದಾಗ ಸಂಸ್ಥೆಯಲ್ಲಿ ಹಲವು ಮಾನದಂಡಗಳು ಪಾಲನೆ ಆಗದಿರುವುದು ಗೊತ್ತಾಗಿದೆ ಎಂದಿರುವ ಮಂಡಳಿಯು, ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದಿದೆ.
2024ರಲ್ಲಿ ಈ ವೈದ್ಯಕೀಯ ಶಿಕ್ಷಣ ಸಂಸ್ಥೆಯು 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲನೆ ಬಳಿಕ 2025ರ ಸೆಪ್ಟೆಂಬರ್ 8ರಂದು ಎಂಬಿಬಿಎಸ್ ಕೋರ್ಸ್ ಆರಂಭಿಸಲು ಅನುಮತಿ ನೀಡಲಾಗಿತ್ತು.
ಕಾಲೇಜಿನ 50 ಸೀಟುಗಳು ನೀಟ್ ಮೆರಿಟ್ ಲಿಸ್ಟ್ ಆಧಾರದ ಮೇಲೆ ಭರ್ತಿಯಾಗಿದ್ದವು. ಈ ಪೈಕಿ 42 ಮುಸ್ಲಿಂ ವಿದ್ಯಾರ್ಥಿಗಳಾಗಿದ್ದರೆ, ಏಳು ಹಿಂದೂ ಮತ್ತು ಒಬ್ಬರು ಸಿಖ್ ವಿದ್ಯಾರ್ಥಿಯಾಗಿದ್ದರು.
‘ಮಾತಾ ವೈಷ್ಣೋದೇವಿ ನಂಬಿಕೆಯ ಮೇಲೆ ನಡೆಯುವ ಸಂಸ್ಥೆಯಲ್ಲಿ ಎಲ್ಲ ಸೀಟುಗಳನ್ನು ಹಿಂದೂಗಳಿಗೆ ಮೀಸಲಿಡಬೇಕು. ಇಲ್ಲದಿದ್ದರೆ ಎಲ್ಲ ಪ್ರವೇಶವನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಮತ್ತು ಅದರ ಸಂಘರ್ಷ ಸಮಿತಿ ಪ್ರತಿಭಟನೆ ಮತ್ತು ಹೋರಾಟಗಳನ್ನು ನಡೆಸಿತ್ತು.
ಬಿಜೆಪಿ ಸ್ವಾಗತ: ‘ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ನಿರ್ಧಾರ ತೆಗೆದುಕೊಂಡ ಎನ್‌ಎಂಸಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಕ್ರಮವನ್ನು ಸ್ವಾಗತಿಸುತ್ತೇವೆ’ ಎಂದು ಬಿಜೆಪಿ ಜಮ್ಮು–ಕಾಶ್ಮೀರದ ಘಟಕದ ಅಧ್ಯಕ್ಷ ಸತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಎನ್‌ಸಿ, ಪಿಡಿಪಿ ಆಕ್ರೋಶ: ಕೇಂದ್ರದ ಈ ಕ್ರಮದಿಂದ ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ರಾಷ್ಟ್ರೀಯ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪಿಡಿಪಿ ಆಕ್ರೋಶ ವ್ಯಕ್ತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.