
ನವದೆಹಲಿ (ಪಿಟಿಐ): ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸರ್ಕಾರದ ಪರ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ರಾಹುಲ್ ಅವರ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರಿಗೆ, ಬಿಜೆಪಿ ಸದಸ್ಯರು ಚಪ್ಪಾಳೆ ತಟ್ಟಿ, ಮೇಜು ಕುಟ್ಟಿ ಹುರಿದುಂಬಿಸಿದರು.
‘ಮಣಿಪುರದಲ್ಲಿ ಭಾರತಾಂಬೆಯ ಹತ್ಯೆಯಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಸಂಸತ್‌ನ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾರೊಬ್ಬರು ಇಂತಹ ಹೇಳಿಕೆ ನೀಡಿರಲಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
‘ಮಣಿಪುರವು ದೇಶದ ಅವಿಭಾಜ್ಯ ಅಂಗವಾಗಿದೆ. ಇದರಲ್ಲಿ ಎಳ್ಳಷ್ಟು ಅನುಮಾನ ಬೇಡ. ಅದನ್ನು ಸರ್ಕಾರ ವಿಭಜಿಸಿಲ್ಲ. ಆದರೆ, ರಾಹುಲ್ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದ್ದಾರೆ. ಇಂತಹ ಬೆಳವಣಿಗೆಯು ಹಿಂದೆಂದೂ ನಡೆದಿರಲಿಲ್ಲ’ ದೂರಿದರು.
‘ನೀವು ಅಸಮರ್ಥರಾಗಿದ್ದೀರಿ (ಕಾಂಗ್ರೆಸ್). ಹಾಗಾಗಿಯೇ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತೀರಿ, ನೀವು ಭಾರತೀಯರಲ್ಲ’ ಎಂದು ಟೀಕಿಸಿದರು.
‘ಇಂಡಿಯಾ’ ಮೈತ್ರಿಕೂಟದ ಸದಸ್ಯರೊಬ್ಬರು ‘ಭಾರತ’ ಎಂದರೆ ಉತ್ತರ ಭಾರತ ಮಾತ್ರವೆಂದು ತಮಿಳುನಾಡಿನಲ್ಲಿ ವ್ಯಾಖ್ಯಾನಿಸಿದ್ದಾರೆ. ರಾಹುಲ್‌ಗೆ ಧೈರ್ಯವಿದ್ದರೆ ಇದಕ್ಕೆ ಪ್ರತಿಕ್ರಿಯಿಸುತ್ತಾರೆಯೇ? ಎಂದು ಸವಾಲು ಹಾಕಿದರು.
ಕಾಶ್ಮೀರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರತಿಪಾದಿಸಿದ್ದಾರೆ. ಹಾಗಿದ್ದರೆ ಅವರು ಕಾಂಗ್ರೆಸ್ ನಾಯಕತ್ವದ ಆದೇಶದಂತೆ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
‘ಭಾರತ್ ಜೋಡೊ ಯಾತ್ರೆ ವೇಳೆ ಅವರಿಗೆ (ರಾಹುಲ್) ಕಾಡಿದ ಮಂಡಿನೋವಿನ ಬಗ್ಗೆ ಮಾತನಾಡಲಾರೆ. ಆದರೆ, ಕಾಶ್ಮೀರ ಕಣಿವೆಯು ರಕ್ತದಲ್ಲಿ ತೊಯ್ದು ಹೋಗಿತ್ತು. ಯಾತ್ರೆಯ ಮುಕ್ತಾಯಕ್ಕೆ ಅಲ್ಲಿಗೆ ಹೋಗಿದ್ದ ಅವರು ಹಿಮದಲ್ಲಿ ಆಟ ಆಡಿದ್ದರು. ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರಿಂದಲೇ ಅವರು ಅಷ್ಟೊಂದು ಸಲೀಸಾಗಿ ಆಟವಾಡಲು ಸಾಧ್ಯವಾಯಿತು’ ಎಂದು ತಿವಿದರು.
‘ಯಾತ್ರೆ ವೇಳೆ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮತ್ತೆ ಮರುಸ್ಥಾಪಿಸುವುದಾಗಿ ರಾಹುಲ್ ಹೇಳಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ’ ಎಂದರು.
ಕಾಂಗ್ರೆಸ್ ಅವಧಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆ ಹಾಗೂ ಕಾಶ್ಮೀರ ಸಂಘರ್ಷ ಉಲ್ಲೇಖಿಸಿದ ಸ್ಮೃತಿ ಅವರು, ‘ಆ ಪಕ್ಷದ ಇತಿಹಾಸಕ್ಕೆ ನೆತ್ತರು ಮೆತ್ತಿಕೊಂಡಿದೆ’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.