ADVERTISEMENT

ಪಶ್ವಿಮ ಬಂಗಾಳ: ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಾಟ

ಪಿಟಿಐ
Published 3 ಜನವರಿ 2023, 12:20 IST
Last Updated 3 ಜನವರಿ 2023, 12:20 IST
   

ಮಾಲ್ಡಾ, ಪಶ್ಚಿಮ ಬಂಗಾಳ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಹೌರಾ– ನ್ಯೂ ಜಲ್‌ಪೈಗುರಿ ಮಾರ್ಗದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮಾಲ್ಡಾ ಜಿಲ್ಲೆಯಲ್ಲಿ ಸೋಮವಾರ ಸಂಜೆ 5.10ಕ್ಕೆ ಕಲ್ಲುತೂರಾಟ ನಡೆಸಲಾಗಿದೆ. ಈ ಪ್ರಕರಣದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಆಯೋಗಕ್ಕೆ (ಎನ್‌ಐಎ) ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಕುಮಾರ್‌ಗಂಜ್‌ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲಿನ ಸಿ13 ಬೋಗಿಯ ಗಾಜಿನ ಬಾಗಿಲಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಘಟನೆ ನಡೆದ ಸ್ಥಳದಲ್ಲಿ ರೈಲನ್ನು ನಿಲುಗಡೆ ಮಾಡದೇ, ನಿಲುಗಡೆ ಸ್ಥಳವಾದ ಮಾಲ್ಡಾ ರೈಲು ನಿಲ್ದಾಣದಲ್ಲೇ ಅದನ್ನು ನಿಲುಗಡೆ ಮಾಡಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್‌) ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಮಾಲ್ಡಾ ಪಟ್ಟಣ ರೈಲ್ವೆ ನಿಲ್ದಾಣದ ರೈಲ್ವೆ ಪೊಲೀಸ್‌ (ಜಿಆರ್‌ಪಿ) ಐ.ಸಿ. ಪ್ರಶಾಂತ್‌ ರೈ ತಿಳಿಸಿದ್ದಾರೆ.

ADVERTISEMENT

ಹೌರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಈ ರೈಲಿಗೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಭಾಗಿಯಾಗಿದ್ದರು. ಆ ವೇಳೆ ಬಿಜೆಪಿ ಪರ ಮತ್ತು ‘ಜೈ ಶ್ರೀರಾಮ್‌’ ಘೋಷಣೆಗಳು ಮೊಳಗಿದ್ದವು. ಇದರಿಂದ ಅಸಮಾಧಾನಗೊಂಡ ಮಮತಾ ವೇದಿಕೆ ಏರಲು ನಿರಾಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಪ್ರತೀಕಾರ ತೀರಿಸಿಕೊಳ್ಳಲು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.