
ಅಲಿಗಢ (ಉತ್ತರ ಪ್ರದೇಶ): ‘ವಂದೇ ಮಾತರಂ’ ಹಾಡಲು ಆಕ್ಷೇಪ ವ್ಯಕ್ತಪಡಿಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯೊಂದರ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಘಟನೆಯು ಶಹಪುರದ ಕತುಬ್ ಪ್ರದೇಶದಲ್ಲಿನ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಬೆಳಗಿನ ಪ್ರಾರ್ಥನೆ ವೇಳೆ ರಾಷ್ಟ್ರಗೀತೆಯ ಬಳಿಕ ‘ವಂದೇ ಮಾತರಂ’ ಹಾಡಲು ಶಿಕ್ಷಕ ಶಂಸುಲ್ ಹಸನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ (ಬಿಎಸ್‌ಎ) ರಾಕೇಶ್ ಕುಮಾರ್ ಸಿಂಗ್ ಅವರು ಗುರುವಾರ ತಿಳಿಸಿದ್ದಾರೆ.
ಶಾಲಾ ಆಡಳಿತ ನೀಡಿದ ದೂರಿನ ಅನ್ವಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶಾಲೆಗೆ ಭೇಟಿ ನೀಡಿ, ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ ಎಂದಿದ್ದಾರೆ.
‘ವಂದೇ ಮಾತರಂ’ ಹಾಡುವುದು ತಮ್ಮ ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ಹಸನ್ ಆರೋಪಿಸುತ್ತಿದ್ದರು ಎಂದು ಶಾಲಾ ಪ್ರಾಂಶುಪಾಲರಾದ ಸುಷ್ಮಾ ರಾಣಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತನಿಖೆಯ ಬಳಿಕ, ಬಿಎಸ್‌ಎ ನಿರ್ದೇಶನಗಳನ್ನು ಉಲ್ಲಂಘಿಸಿದ ಮತ್ತು ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಆರೋಪದಡಿ ಹಸನ್ ಅವರನ್ನು ಅಮಾನತುಗೊಳಿಸಲಾಗಿದೆ.
ಸಹದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವನ್ನು ಅಲ್ಲಗಳೆದ ಹಸನ್, ‘ಶಾಲೆಯ ಪ್ರಾರ್ಥನಾ ಸಮಯದಲ್ಲಿ ಈ ಹಾಡು ಹಾಡುವ ಮೊದಲು ಮಕ್ಕಳ ಪೋಷಕರ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕು ಎಂದು ನಾನು ಸಲಹೆ ನೀಡಿದ್ದೆನಷ್ಟೆ’ ಎಂದು ಹಸನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.