ADVERTISEMENT

ವಿಬಿ–ಜಿ ರಾಮ್‌ ಜಿ ಕಾಯ್ದೆಯೂ ರದ್ದಾಗಲಿದೆ: ಡಿಎಂಕೆ

ಪಿಟಿಐ
Published 20 ಡಿಸೆಂಬರ್ 2025, 13:42 IST
Last Updated 20 ಡಿಸೆಂಬರ್ 2025, 13:42 IST
<div class="paragraphs"><p>ಡಿಎಂಕೆ ಪಕ್ಷದ ಲೋಗೊ</p></div>

ಡಿಎಂಕೆ ಪಕ್ಷದ ಲೋಗೊ

   

ಚೆನ್ನೈ : ‘ನರೇಗಾ’ಕ್ಕೆ ಪರ್ಯಾಯವಾಗಿ ರೂಪಿಸಿರುವ ‘ವಿಬಿ–ಜಿ ರಾಮ್‌ ಜಿ’ ಮಸೂದೆ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶನಿವಾರ ವಾಗ್ದಾಳಿ ನಡೆಸಿದೆ.

‘ಹೊಸ ಮಸೂದೆಯಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ಮಾತ್ರ ಸಮಸ್ಯೆಯಲ್ಲ; 125 ದಿನಗಳ ಉದ್ಯೋಗಕ್ಕೆ ಖಾತರಿಯನ್ನೂ ನೀಡುವುದಿಲ್ಲ. ಈ ಯೋಜನೆಯನ್ನು ಯಾವುದೇ ಸಮಯದಲ್ಲಿ ರದ್ದು ಮಾಡಲು ಅಗತ್ಯವಿರುವ ಎಲ್ಲ ಅಂಶಗಳನ್ನೂ ಮಸೂದೆಯು ಒಳಗೊಂಡಿದೆ’ ಎಂದು ಹರಿಹಾಯ್ದಿದೆ.

ADVERTISEMENT

ಉದ್ಯೋಗ ಖಾತರಿ ಯೋಜನೆಯ ಮುಖ್ಯ ಧ್ಯೇಯವನ್ನೇ ಕೈಬಿಡಲಾಗಿದೆ ಎಂದು ಡಿಎಂಕೆ ಮುಖವಾಣಿ ‘ಮುರಸೋಳಿ’ಯ ಡಿಸೆಂಬರ್‌ 20ರ ಆವೃತ್ತಿಯಲ್ಲಿ ಆರೋಪಿಸಲಾಗಿದೆ.

‘ಗಾಂಧಿ ಅವರ ಹೆಸರನ್ನು ಕೈಬಿಟ್ಟಿರುವುದರಿಂದ ಅವರ ವರ್ಚಸ್ಸೇನೂ ಕಡಿಮೆಯಾಗುವುದಿಲ್ಲ. ಜನರ ಮನಸ್ಸಿನಲ್ಲಿ ಅವರು ಎಂದಿಗೂ ಜೀವಂತ’ ಎಂದು ಹೇಳಿದೆ.

ಯೋಜನೆಗೆ ಕೇಂದ್ರ ಮತ್ತು ರಾಜ್ಯಗಳು 60:40ರ ಅನುಪಾತದಲ್ಲಿ ಅನುದಾನ ನೀಡಬೇಕಿರುವುದು ರಾಜ್ಯಗಳ ಸಂಪತ್ತನ್ನು ಲೂಟಿ ಮಾಡುವ ತಂತ್ರ. 125 ದಿನಗಳ ಉದ್ಯೋಗಕ್ಕೆ ಖಾತರಿ ನೀಡುವುದಾಗಿ ಹೇಳಲಾಗಿದೆ. ಖಂಡಿತ ಅದು ಕಾರ್ಯರೂಪಕ್ಕೆ ಬರದು ಎಂದು ಹೇಳಿದೆ.

ಕೇಂದ್ರ ಸರ್ಕಾರದ ‘ಬಹು ಆಯಾಮ ಬಡತನ ಸೂಚ್ಯಂಕ’ (ಎಂಪಿಐ) ಆಧರಿಸಿ ಫಲಾನುಭವಿಗಳನ್ನು ಪಟ್ಟಿ ಮಾಡಲಾಗುತ್ತದೆ. ಇದು ಬಡತನದ ನಿರ್ಮೂಲನೆಗೆ ಶ್ರಮಿಸುತ್ತಿರುವ ತಮಿಳುನಾಡಿನಂತಹ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲ ದತ್ತಾಂಶವನ್ನು ಒದಗಿಸಿ ಬಡತನ ನಿರ್ಮೂಲನೆಯಾಗಿದೆ ಎಂದು ಬಿಂಬಿಸಿ ಯೋಜನೆಯನ್ನು ರದ್ದುಗೊಳಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಕಪ್ಪು ಕಾಯ್ದೆಯ ವಿರುದ್ಧ ಹೋರಾಡಿ: ಸೋನಿಯಾ ಕರೆ

ನವದೆಹಲಿ (ಪಿಟಿಐ): ನರೇಂದ್ರ ಮೋದಿ ಸರ್ಕಾರ ನರೇಗಾ ಕಾಯ್ದೆಯನ್ನು ನೆಲಸಮಗೊಳಿಸುತ್ತಿದೆ. ನೂತನ ‘ಕಪ್ಪು ಕಾಯ್ದೆ’ಯ ವಿರುದ್ಧ ಸಂಘಟಿತವಾಗಿ ಹೋರಾಡಿ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಕಾರ್ಯಕರ್ತರಿಗೆ ಶನಿವಾರ ಕರೆ ನೀಡಿದರು. ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿರುವ ಅವರು ‘ನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಮೂಲಕ ಕೋಟ್ಯಂತರ ರೈತರು ಕಾರ್ಮಿಕರು ಮತ್ತು ಭೂರಹಿತರ ಹಿತಾಸಕ್ತಿಯ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು. 11 ವರ್ಷಗಳಿಂದ ಕೇಂದ್ರ ಸರ್ಕಾರವು ಗ್ರಾಮೀಣ ಬಡ ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂದು ದೂರಿದರು. 

‘ನರೇಗಾ ಹಣ ಲೂಟಿ ಮಾಡುತ್ತಿದ್ದವರಿಗಷ್ಟೇ ನೋವು’

ಇಂದೋರ್‌: ವಿಬಿ–ಜಿ–ರಾಮ್‌ ಜಿ ಮಸೂದೆಯು ದೇಶದ ಹಿತಾಸಕ್ತಿ. ನರೇಗಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳ ಕೂಲಿ ಹಣವನ್ನು ಲೂಟಿ ಮಾಡುತ್ತಿದ್ದವರಿಗಷ್ಟೇ ಮಸೂದೆಯ ಅನುಷ್ಠಾನದಿಂದ ನೋವಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

ಹೊಸ ಮಸೂದೆಯು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಇದರಿಂದ ರೈತರು ಮತ್ತು ಯುವಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಟೀಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅವರು ‘ಅವರು ವಿರೋಧ ಪಕ್ಷಗಳ ನಾಯಕರಾಗಿದ್ದರೆ ಕನಿಷ್ಠ ಸಂಸತ್ತಿನಲ್ಲಿ ಇರಬೇಕು’ ಎಂದು ಹೇಳಿದರು.

‘ಕಾಂಗ್ರೆಸ್‌ ನರೇಗಾ ಯೋಜನೆ ಜಾರಿ ಮಾಡಿದಾಗ ₹10000 ಕೋಟಿಯನ್ನೂ ಮೀಸಲಿಡುತ್ತಿರಲಿಲ್ಲ. ಆದರೆ ವಿಬಿ–ಜಿ–ರಾಮ್‌ ಜಿ ಮಸೂದೆಯು ₹1 ಲಕ್ಷ ಕೋಟಿಗಿಂತ ಅಧಿಕ ಹಣವನ್ನು ಒದಗಿಸುತ್ತಿದೆ. ಇದು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.