ಶಬರಿಮಲೆ ದೇಗುಲ
–ಪಿಟಿಐ ಚಿತ್ರ
ಪಾಲಕ್ಕಾಡ್(ಕೇರಳ): ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಷಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಟೀಕಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶನ್, ‘ಈ ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ‘ಹೌದು ಅಥವಾ ಇಲ್ಲ’– ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಋತುಮತಿಯಾದ ಮಹಿಳೆಯರಿಗೆ ದೇಗುಲ ಪ್ರವೇಶಿಸುವುದನ್ನು ಬೆಂಬಲಿಸುವ ತನ್ನ ಹಿಂದಿನ ಪ್ರಮಾಣಪತ್ರವನ್ನು ಸರಿಪಡಿಸುವಂತೆ ಆಗ್ರಹಿಸಿದರು.
‘ಈ ವಿಷಯದಲ್ಲಿ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳದೇ, ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ಮೌನವಾಗಿದ್ದಾರೆ. ‘ಸರಿಯಾದ ಸಮಯದಲ್ಲಿ ಸರಿಯಾದ ನಿಲುವು ತೆಗೆದುಕೊಳ್ಳುತ್ತೇವೆ’ ಎಂದಷ್ಟೇ ಹೇಳುತ್ತಿದ್ದಾರೆ. ಅವರು ವಿಧಾನಸಭಾ ಚುನಾವಣೆ ಮುಗಿಯುವುದನ್ನು ಕಾಯುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
‘ಶಬರಿಮಲೆ ದೇಗಲಕ್ಕೆ ಮಹಿಳೆಯರ ಪ್ರವೇಶವನ್ನು ಸರ್ಕಾರ ಒಪ್ಪುತ್ತದೆಯೇ, ಇಲ್ಲವೇ ಎಂಬುದು ನಮಗೆ ಗೊತ್ತಾಗಬೇಕಿದೆ’ ಎಂದು ಸತೀಶನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.