ADVERTISEMENT

ಎನ್‌ಜಿಟಿ ಆದೇಶ ಪ್ರಶ್ನಿಸಿ ‘ಸುಪ್ರೀಂ‘ ಮೊರೆ ಹೋಗಲು ತಮಿಳುನಾಡು ನಿರ್ಧಾರ

ಏಳು ತಿಂಗಳ ನಂತರ ಪುನರ್‌ ಆರಂಭಕ್ಕೆ ಎನ್‌ಜಿಟಿ ಹಸಿರು ನಿಶಾನೆ* ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 16:36 IST
Last Updated 15 ಡಿಸೆಂಬರ್ 2018, 16:36 IST
ವೇದಾಂತ ಕಂಪನಿ ಒಡೆತನದ ತಾಮ್ರ ಸಂಸ್ಕರಣಾ ಘಟಕ
ವೇದಾಂತ ಕಂಪನಿ ಒಡೆತನದ ತಾಮ್ರ ಸಂಸ್ಕರಣಾ ಘಟಕ   

ಚೆನ್ನೈ:ತೂತ್ತುಕುಡಿ ತಾಮ್ರ ಸಂಸ್ಕರಣಾ ಘಟಕ ಪುನರ್‌ ಆರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ತಿಳಿಸಿದ್ದಾರೆ.

ಮಂಡಳಿ ಆದೇಶ ಹೊರಬಿದ್ದ ನಂತರ ಪ್ರತಿಕ್ರಿಯೆ ನೀಡಿದ ಪಳನಿಸ್ವಾಮಿ ಅವರು, ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ತಾಮ್ರ ಘಟಕವನ್ನು ಶಾಶ್ವತವಾಗಿ ಮುಚ್ಚಿಸಬೇಕು ಎಂಬ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪರಿಸರ ಸಚಿವ ಕೆ.ಸಿ. ಕರುಪ್ಪಣ್ಣನ್‌ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಪರಿಸರ ನಿಮವಾಳಿ ಉಲ್ಲಂಘಿಸಿದ ವೇದಾಂತ ಕಂಪನಿಯ ತಾಮ್ರ ಘಟಕ ಯಾವುದೇ ಕಾರಣಕ್ಕೂ ಪುನರ್‌ ಕಾರ್ಯಾರಂಭ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ತೂತ್ತುಕುಡಿಯಲ್ಲಿರುವ ವೇದಾಂತ ಕಂಪನಿ ಒಡೆತನದ ತಾಮ್ರ ಸಂಸ್ಕರಣಾ ಘಟಕವನ್ನು ಪುನರ್‌ ಆರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಶನಿವಾರ ಒಪ್ಪಿಗೆ ನೀಡಿದೆ.

ಪರಿಸರ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಏಳು ತಿಂಗಳ ಹಿಂದೆ ಕಾರ್ಖಾನೆಗೆ ತಮಿಳುನಾಡು ಸರ್ಕಾರ ಬೀಗ ಹಾಕಿತ್ತು.ಪರಿಸರಕ್ಕೆ ಹಾನಿ ಮಾಡುತ್ತಿರುವ ತಾಮ್ರ ಘಟಕಕ್ಕೆ ಶಾಶ್ವತವಾಗಿ ಬೀಗ ಜಡಿಯುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ವೇದಾಂತ ಕಂಪೆನಿಯು ಎನ್‌ಜಿಟಿ ಮೊರೆ ಹೋಗಿತ್ತು.

ಅರ್ಜಿ ವಿಚಾರಣೆ ನಡೆಸಿದ ಎನ್‌ಜಿಟಿ ಪೀಠವು ತಮಿಳುನಾಡು ಸರ್ಕಾರದ ಆದೇಶವನ್ನು ತಳ್ಳಿ ಹಾಕಿದೆ. ಅಲ್ಲದೇ, ಮೂರು ವಾರದೊಳಗೆ ಕಾರ್ಖಾನೆಯ ಪರವಾನಗಿ ನವೀಕರಣ ಮಾಡಿ ಹೊಸ ಆದೇಶ ಹೊರಡಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.