ವೀಣಾ ದೇವಿ
– ಎಕ್ಸ್ ಚಿತ್ರ
ಮೊಕಮಾ (ಬಿಹಾರ): ಗಂಡನ ಸ್ವಭಾವ ಬದಲಾಯಿಸಿದಂತೆ ಕ್ಷೇತ್ರವನ್ನೂ ಸುಧಾರಿಸುತ್ತೇನೆ ಎಂದು ಮೊಕಮಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ವೀಣಾ ದೇವಿ ಹೇಳಿದ್ದಾರೆ.
ಪಿಟಿಐ ಜೊತೆಗೆ ಮಾತನಾಡಿದ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅವರ ಅಭಿವೃದ್ಧಿ ಹೆದ್ದಾರಿ ಹಾಗೂ ಮೇಲ್ಸೇತುವೆಗೆ ಮಾತ್ರ ಸೀಮಿತವಾಗಿತ್ತು, ಸಾಮಾನ್ಯ ಜನರ ಸಂಕಷ್ಟ ಹಾಗೆಯೇ ಇದೆ ಎಂದು ಹೇಳಿದ್ದಾರೆ.
ಮೊಕಮಾದ ಮಾಜಿ ಶಾಸಕರ ಪತ್ನಿಯಾಗಿರುವ ವೀಣಾ ದೇವಿ ಈ ಹಿಂದೆ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ಕ್ರಿಮಿನಲ್ ಹಿನ್ನೆಲೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಪತಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲದಿರುವುದರಿಂದ, ವೀಣಾಗೆ ಆರ್‌ಜೆಡಿ ಟಿಕೆಟ್ ನೀಡಿದೆ.
‘ನನ್ನ ಪತಿ ಈಗ ಕ್ರಿಮಿನಲ್ ಅಲ್ಲ, ಅವರು ಹಲವು ವರ್ಷ ಜನಪ್ರತಿನಿಧಿಯಾಗಿದ್ದವರು. ಪತಿ ಸ್ವಭಾವ ಪರಿಷ್ಕರಿಸಿದಂತೆ ಕ್ಷೇತ್ರವನ್ನೂ ಬದಲಾಯಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಬಿಹಾರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಬಡ ಜನರು ವಾಸಿಸುವ ಗ್ರಾಮೀಣ, ನಗರ ಪ್ರದೇಶದ ಪರಿಸ್ಥಿತಿ ಬದಲಾಗಿಯೇ ಇಲ್ಲ’ ಎಂದು ಹೇಳಿದ್ದಾರೆ.
ಚುನಾವಣೆ ಬಂದಾಗ ನಾಯಕರು ವಿವಿಧ ಭಾಗಗಳಿಗೆ ಹೆಲಿಕಾಪ್ಟರ್ ಮೂಲಕ ತೆರಳುತ್ತಾರೆ. ಆದರೆ ಶಾಸಕರು ಮತ್ತು ಸಂಸದರು ಜನರ ಆಕ್ರೋಶವನ್ನು ಎದುರಿಸಬೇಕು. ಸಂಸದೆಯಾಗಿದ್ದಾಗ ನಾನು ಹಲವು ಸಮಸ್ಯೆಗಳನ್ನು ಎತ್ತಿದ್ದೆ. ನಿಜವಾಗಿಯೂ ಅಧಿಕಾರ ಇರುವ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದ್ದಾರೆ.
ಪತಿ ಸುರಜ್‌ಭನ್ ಸಿಂಗ್ ಈ ಹಿಂದೆ ಇದೇ ಕ್ಷೇತ್ರದ ಶಾಸಕರಾಗಿದ್ದರು. ಲೋಕ ಜನಶಕ್ತಿ ಪಕ್ಷದಿಂದ (ಎಲ್‌ಜೆಪಿ) ಸಂಸದರೂ ಆಗಿದ್ದರು. ಕೊಲೆ ಪ್ರಕರಣವೊಂದರಲ್ಲಿ ದೋಷಿಯಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.
2014–19ರ ವರೆಗೆ ವೀಣಾ ದೇವಿ ಎಲ್‌ಜೆಪಿಯಿಂದ ಮುಂಗೇರ್ ಕ್ಷೇತ್ರದ ಸಂಸದರಾಗಿದ್ದರು. ಈಗ ಆರ್‌ಜೆಡಿಯಿಂದ ಮೊಕಮಾ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.
2020ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅನಂತ್ ಸಿಂಗ್ ಆರ್‌ಜೆಡಿಯಿಂದ ಗೆದ್ದಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ದೋಷಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಈ ಬಾರಿ ಅವರು ಜೆಡಿಯುಗೆ ಪಕ್ಷಾಂತರ ಮಾಡಿದ್ದಾರೆ.
ಜೆಡಿಯುನಿಂದ ಅನಂತ್ ಸಿಂಗ್ ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.