ADVERTISEMENT

ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

ಪಿಟಿಐ
Published 16 ಜುಲೈ 2023, 9:39 IST
Last Updated 16 ಜುಲೈ 2023, 9:39 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ತರಕಾರಿ ಬೆಲೆ ಏರಿಕೆ ಇದೀಗ ರಾಜಕೀಯ ವಿರೋಧಿಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. 'ತರಕಾರಿ ಬೆಲೆ ಏರಿಕೆಗೆ ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಕಾರಣ' ಎಂಬ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಗುವಾಹಟಿಯಲ್ಲಿ ತರಕಾರಿ ಬೆಲೆ ಏರಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶರ್ಮ, ‘ಹಳ್ಳಿಗಳಲ್ಲಿ ತರಕಾರಿ ದುಬಾರಿಯಾಗಿಲ್ಲ. ಇಲ್ಲಿ ಮಿಯಾ (ಬಂಗಾಳಿ ಮುಸ್ಲಿಮರು) ವ್ಯಾಪಾರಿಗಳು ನಮ್ಮಿಂದ ಹೆಚ್ಚು ಹಣ ಪಡೆಯುತ್ತಿದ್ದಾರೆ. ಅಸ್ಸಾಮೀಯರೇ ತರಕಾರಿ ವ್ಯಾಪಾರ ಮಾಡುವಂತಾಗಿದ್ದರೆ, ಅವರು ನಮ್ಮಿಂದ ಸುಲಿಗೆ ಮಾಡುತ್ತಿರಲಿಲ್ಲ’ ಎಂದು ಹೇಳಿದ್ದರು. 

‘ಗುವಾಹಟಿಯ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುತ್ತೇನೆ. ವ್ಯಾಪಾರ ಆರಂಭಿಸುವಂತೆ ಅಸ್ಸಾಮೀಯರಿಗೆ ಕೇಳಿಕೊಳ್ಳುತ್ತೇನೆ’ ಎಂದಿದ್ದರು.

ADVERTISEMENT

ಬಿಸ್ವಾ ಹೇಳಿಕೆಗೆ ಭಾರೀ ವಿರೋಧ

ಮುಖ್ಯಮಂತ್ರಿ ಅವರ ಹೇಳಿಕೆಗೆ ಎಐಯುಡಿಎಫ್ (ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 'ಮಿಯಾಗಳು ತರಕಾರಿ ಬೆಲೆಯನ್ನು ನಿಯಂತ್ರಿಸುತ್ತಿಲ್ಲ. ಮುಖ್ಯಮಂತ್ರಿ ಅವರ ಹೇಳಿಕೆ ಮಿಯಾ ಸಮುದಾಯಕ್ಕೆ ನೋವುಂಟು ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಇಂತಹ ಹೇಳಿಕೆಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ. ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿ ಅಹಿತಕರ ಘಟನೆ ನಡೆದರೆ ಅದಕ್ಕೆ ಮುಖ್ಯಮಂತ್ರಿಗಳು ಮತ್ತು ಸರ್ಕಾರವೇ ನೇರ ಹೊಣೆ' ಎಂದು ಹೇಳಿದರು.

'ನಿರುದ್ಯೋಗ, ಬೆಲೆ ಏರಿಕೆ, ಅಕ್ರಮ ವಲಸಿಗರು ಹೀಗೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಹಾಗಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರಗಳಲ್ಲಿ ತೊಡಗಿದೆ. ಜನರ ನಡುವೆ ಒಡಕು ಮೂಡಿಸುವ ಉದ್ದೇಶದಿಂದ ಹಿಮಂತ್‌ ಬಿಸ್ವಾ ಶರ್ಮಾ ಮತ್ತು ಬದ್ರುದ್ದೀನ್ ಅಜ್ಮಲ್ ಇಬ್ಬರೂ ಒಟ್ಟಾಗಿ ಈ 'ಮಿಯಾ-ಅಸ್ಸಾಮಿ' ವಿವಾದವನ್ನು ಸೃಷ್ಟಿಸಿದ್ದಾರೆ‘ ಎಂದು ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಹೇಳಿದರು.

'ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಕೋಮು ಸೂಕ್ಷ್ಮ ವಿಷಯಗಳನ್ನು ಮುನ್ನೆಲೆ ತರುತ್ತಿದೆ' ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ವಕ್ತಾರ ಹೇಮಂತ ಫುಕನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.