ADVERTISEMENT

ಕಬಳಿಸಿದ ಭೂಮಿಯಲ್ಲಿ ನಮಾಜ್ ಮಾಡುವುದು ನಾವು ಒಪ್ಪಲ್ಲ: ವಿಎಚ್‍ಪಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 11:02 IST
Last Updated 25 ನವೆಂಬರ್ 2018, 11:02 IST
   

ಅಯೋಧ್ಯೆ:ಬಾಬರಿ ಮಸೀದಿ ಧ್ವಂಸ ನಂತರವೇ ರಾಮ ಮಂದಿರ ವಿವಾದ ಶುರುವಾಗಿದೆ ಎಂದು ಕೆಲವು ಬುದ್ಧಿಜೀವಿಗಳು ಹೇಳುತ್ತಿದ್ದಾರೆ. ಆದರೆ ರಾಮಮಂದಿರಕ್ಕಾಗಿರುವ ಹೋರಾಟ 490 ವರ್ಷಗಳ ಹಿಂದೆಯೇ ಇತ್ತು. ಭೂಮಿಯನ್ನು ಪಾಲು ಮಾಡುವ ಅಗತ್ಯವಿಲ್ಲ. ನಮಗೆ ಇಡೀ ಭೂಮಿ ಬೇಕು. ಕೇಂದ್ರ ಸರ್ಕಾರ ನಮ್ಮ ಆಶಯವನ್ನು ಈಡೇರಿಸಬೇಕು. ಕಬಳಿಸಿದ ಭೂಮಿಯಲ್ಲಿ ನಮಾಜ್ ಮಾಡುವುದನ್ನು ನಾವು ಒಪ್ಪಲ್ಲ. ಬಲವಂತವಾಗಿ ಆ ಭೂಮಿಯನ್ನು ಕಬಳಿಸಲಾಗಿದೆ. ಯಾರೊಬ್ಬರೂ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ವಿಎಚ್‍ಪಿ ಉಪಾಧ್ಯಕ್ಷ ಚಂಪತ್ ರೈ ಹೇಳಿದ್ದಾರೆ.

ಅಯೋಧ್ಯೆ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಹಾಗಾಗಿ ದೇವಾಲಯವನ್ನು ಮಾತ್ರ ಅಲ್ಲಿ ನಿರ್ಮಿಸಬೇಕು.ಭಾರತದಲ್ಲಿ ಬಾಬರಿ ಮಸೀದಿ ಎಂಬ ಹೆಸರೇ ಇಲ್ಲ.ಕೆಲವೊಬ್ಬರು ಹಿಂದೂಗಳನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ರಾಮ್ ಲಲ್ಲಾ ಈಗ ಲಾಕಪ್‍ನಲ್ಲಿದ್ದು ಅವನನ್ನು ನಾವು ದೇವಾಲಯದಲ್ಲಿಡಬೇಕಿದೆ ಎಂದಿದ್ದಾರೆ ರೈ.

ಅಯೋಧ್ಯೆ, ಕಾಶಿ, ಮಥುರಾ ಹಿಂದೂಗಳಿಗೆ ಬೇಕು: ಆರ್ ಎಸ್ ಎಸ್
ಹಿಂದೂಗಳಿಗೆ ಅಯೋಧ್ಯೆ, ಕಾಶಿ, ಮಥುರಾ ಬೇಕು.ಧರ್ಮ ಸಭೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದನ್ನು ನಾವು ಪಾಲಿಸುತ್ತೇವೆ ಎಂದು ಆರ್ ಎಸ್ ಎಸ್ಹೇಳಿದೆ.

ADVERTISEMENT

ಗುಪ್ತಚರ ಸಂಸ್ಥೆ ಸಿಬ್ಬಂದಿಗಳ ನಿಯೋಜನೆ
ಸುರಕ್ಷಾ ವ್ಯವಸ್ಥೆಯ ಅಂಗವಾಗಿ ಗುಪ್ತಚರ ಸಂಸ್ಥೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಎಡಿಜಿ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ನಿರ್ಣಯ
ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಣಯ ತೆಗೆದುಕೊಂಡಿರುವ ವಿಎಚ್‍ಪಿಯ ಧರ್ಮ ಸಭೆ, ಮಂದಿರ ನಿರ್ಮಾಣಕ್ಕಾಗಿ ಗಡುವು ನೀಡಿಲ್ಲ. ಅದೇ ವೇಳೆ ಸುಗ್ರೀವಾಜ್ಞೆಗೆ ಒತ್ತಾಯವನ್ನೂ ಮಾಡಿಲ್ಲ.

ರಾಮ ಮಂದಿರದ ಭೂಮಿಯನ್ನು ಹಸ್ತಾಂತರಿಸಿ
ಸುಗ್ರೀವಾಜ್ಞೆಗಾಗಿ ಬಿಜೆಪಿ ಮುಂದಾಗುವ ಮುನ್ನ ರಾಮ ಮಂದಿರದ ಭೂಮಿಯನ್ನು ನಮಗೆ ಹಸ್ತಾಂತರಿಸಿ ಎಂದು ಧರ್ಮ ಸಭೆ ಮುಸ್ಲಿಮರಲ್ಲಿ ಒತ್ತಾಯಿಸಿದೆ.

ರ‍್ಯಾಲಿಸ್ಥಳದಲ್ಲಿ 2 ಲಕ್ಷ ಜನರು ಜಮಾವಣೆ
ಅಯೋಧ್ಯೆ ಬಡೇ ಭಕ್ತ್ ಮಹಲ್‍ನಲ್ಲಿ ವಿಎಚ್‍ಪಿ ಆಯೋಜಿಸಿರುವ ಧರ್ಮ ಸಭೆಯಲ್ಲಿ ಭಾಗವಹಿಸಲು ಸುಮಾರು 2 ಲಕ್ಷ ಮಂದಿ ಸೇರಿದ್ದಾರೆ. ಜನರು ಬೈಕ್, ವ್ಯಾನ್, ಶಾಲಾ ಬಸ್, ಟ್ರಕ್ ಮತ್ತು ಕಾರುಗಳಲ್ಲಿ ಜನರು ಆಗಮಿಸುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಬರಬಂಕಿ ಜಿಲ್ಲೆಯ ಜನರೂ ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.ಬಚ್ಚಾ ಬಚ್ಚಾ ರಾಮ್ ಕಾ, ಜನ್ಮಭೂಮಿ ಕಾ ಕಾಮ್ ಕಾ, ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಜನರು ಕೂಗುತ್ತಿದ್ದಾರೆ.

ಅಯೋಧ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಇದ್ದು ಫೈಜಾಬಾದ್- ಅಯೋಧ್ಯೆ ಹೆದ್ದಾರಿಯಲ್ಲಿ ಆರ್‌ಎಎಫ್ ಸಿಬ್ಬಂದಿಗಳು ಟ್ರಾಫಿಕ್ ನಿಯಂತ್ರಿಸುತ್ತಿದ್ದಾರೆ.

ಲಖನೌ- ಗೋರಖ್‍ಪುರ್ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಸಂಚಾರ ದಟ್ಟಣೆ ಇದೆ.
ಸುರಕ್ಷೆಗಾಗಿ ಅಯೋಧ್ಯೆಯನ್ನು ಕೆಂಪು ಮತ್ತು ಹಳದಿ ವಲಯಗಳಾಗಿ ವಿಂಗಡಿಸಲಾಗಿದೆಎಂದು ಎಡಿಜಿ (ಕಾನೂನು ಮತ್ತು ಆದೇಶ) ಆನಂದ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.