ADVERTISEMENT

ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ: ಚುನಾವಣಾ ಆಯೋಗ

ಧನಕರ್‌ ರಾಜೀನಾಮೆ ನೀಡಿದ ಬಳಿಕ ತೆರವಾದ ಹುದ್ದೆ

ಪಿಟಿಐ
Published 1 ಆಗಸ್ಟ್ 2025, 14:26 IST
Last Updated 1 ಆಗಸ್ಟ್ 2025, 14:26 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ನವದೆಹಲಿ: ‘ಜಗದೀಪ್‌ ಧನಕರ್‌ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್‌ 9ರಂದು ಮತದಾನ ನಡೆಯಲಿದೆ’ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಆಗಸ್ಟ್‌ 7ರಂದು ಈ ಸಂಬಂಧ ಅಧಿಸೂಚನೆ ಪ್ರಕಟಿಸಲಿದ್ದು, ಆಗಸ್ಟ್‌ 21 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಒಂದು ದಿನದ ನಂತರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ. 25ರವರೆಗೆ ನಾಮಪತ್ರ ವಾಪಸ್‌ ಪಡೆಯಬಹುದು.

ADVERTISEMENT

ಅವಿರೋಧ ಆಯ್ಕೆಯಾಗದಿದ್ದರೆ, ಚುನಾವಣೆ ನಡೆಯಲಿದೆ. ಇದಕ್ಕಾಗಿ ಆಯೋಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸೆ.9ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನೂತನ ಸಂಸತ್‌ ಭವನದ ಮೊದಲ ಮಹಡಿಯಲ್ಲಿರುವ ‘ವಸುಧಾ’ ಎಫ್‌–101 ಕೊಠಡಿಯಲ್ಲಿ ಮತದಾನ ನಡೆಯಲಿದೆ. ಅದೇ ದಿನ, ಫಲಿತಾಂಶವು ಪ್ರಕಟಗೊಳ್ಳಲಿದೆ. 

ಜುಲೈ 21ರಂದು ಧನಕರ್‌ ಅವರು ದಿಢೀರ್‌ ರಾಜೀನಾಮೆ ನೀಡಿದ ಬಳಿಕ ಉಪ ರಾಷ್ಟ್ರಪತಿ ಹುದ್ದೆಯು ಖಾಲಿ ಉಳಿದಿದೆ.

ಉಪರಾಷ್ಟ್ರಪತಿ ಆಯ್ಕೆಯ ಚುನಾವಣೆಯಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ನಾಮ ನಿರ್ದೇಶನಗೊಂಡ ಸದಸ್ಯರು ಮತದಾನ ಮಾಡಲು ಅವಕಾಶವಿದೆ. ಅದರಂತೆ, ರಾಜ್ಯಸಭೆಯ 233 ಚುನಾಯಿತ ಸದಸ್ಯರು, 12 ನಾಮನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆಯ 543 ಸಂಸದರು ಮತದಾನ ಮಾಡುವ ಅರ್ಹತೆ ಹೊಂದಿರುತ್ತಾರೆ.

ರಾಜ್ಯಸಭೆಯ ಐದು ಸ್ಥಾನಗಳು ಖಾಲಿ ಉಳಿದಿದ್ದು, ಪಶ್ಚಿಮ ಬಂಗಾಳದ ಬಶಿರ್‌ಹಾಟ್‌ ಲೋಕಸಭಾ ಕ್ಷೇತ್ರವು ಖಾಲಿ ಇರುವ ಕಾರಣ ಒಟ್ಟು ಸದಸ್ಯತ್ವವು 782ಕ್ಕೆ ಇಳಿದಿದೆ.

ಆಡಳಿತಾರೂಢ ಎನ್‌ಡಿಎ ಒಕ್ಕೂಟವು 422 ಸದಸ್ಯರನ್ನು ಹೊಂದಿದ್ದು, ಸರಳ ಬಹುಮತವನ್ನು ಹೊಂದಿದೆ. 

ಕಾಂಗ್ರೆಸ್‌ನಿಂದ ಸ್ಪರ್ಧೆಯ ಸುಳಿವು:

ಎನ್‌ಡಿಎ ಸರಳ ಬಹುಮತ ಹೊಂದಿದ್ದರೂ ಕೂಡ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸೂಚನೆ ನೀಡಿದೆ. ‘ವಿರೋಧ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಒಮ್ಮತ ಮೂಡಿಲ್ಲ. ಆದರೆ ಸರ್ಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಒಮ್ಮತ ಮೂಡಲು ಸಾಧ್ಯವೇ ಇಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈ ರಾಮ್‌ ರಮೇಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.