ನ್ಯಾಯಮೂರ್ತಿ ಸುದರ್ಶನ ರೆಡ್ಡಿ
ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಂಗಳವಾರ ನಡೆದ ‘ಇಂಡಿಯಾ’ ಕೂಟದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ರೆಡ್ಡಿ ಅವರನ್ನು ಕಣಕ್ಕಿಳಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ನಡೆಯು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧದ ಸೈದ್ಧಾಂತಿಕ ಯುದ್ಧ ಎಂದು ವಿಪಕ್ಷ ಮೈತ್ರಿಕೂಟ ಹೇಳಿಕೊಂಡಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಜೆಪಿ ಮಾಡಿದೆ. ತಮಿಳುನಾಡಿನ ಪ್ರಖ್ಯಾತ ವ್ಯಕ್ತಿಯನ್ನು ಕಣಕ್ಕಿಳಿಸಿ ಎನ್‌ಡಿಎಗೆ ತಿರುಗೇಟು ನೀಡಬೇಕು ಎಂದು ಡಿಎಂಕೆ ಬಯಸಿತ್ತು. ಇದಕ್ಕೆ ಉಳಿದ ಪಕ್ಷಗಳು ಒಪ್ಪಿಗೆ ಸೂಚಿಸಲಿಲ್ಲ.
ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್‌ಗೆ ರಾಜಕೀಯ ಸಂದಿಗ್ಧ ಉಂಟುಮಾಡಬಹುದಾದ ತೆಲುಗು ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಪ್ರತಿದಾಳಿ ನಡೆಸಲಾಗಿದೆ ಎಂದು ವಿಪಕ್ಷಗಳ ಒಂದು ವರ್ಗ ವ್ಯಾಖ್ಯಾನಿಸಿದೆ.
ಎರಡು ದಿನಗಳ ಸುದೀರ್ಘ ಸಮಾಲೋಚನೆಯ ಬಳಿಕ ವಿಪಕ್ಷ ಕೂಟವು ಅಭ್ಯರ್ಥಿಯ ಹೆಸರನ್ನು ಆಖೈರುಗೊಳಿಸಿದೆ. ಇಸ್ರೊ ಮಾಜಿ ವಿಜ್ಞಾನಿ ಮೈಲ್‌ಸ್ವಾಮಿ ಅಣ್ಣಾದೊರೈ, ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಬಾಲಚಂದ್ರ ಮುಂಗೇಕರ್ ಅವರ ಹೆಸರುಗಳನ್ನು ಸಹ ಚರ್ಚಿಸಲಾಗಿತ್ತು. ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯನ್ನು ಆಮ್ ಆದ್ಮಿ ಪಕ್ಷ ಸಹ ಬೆಂಬಲಿಸಲಿದೆ ಎಂಬ ವಿಶ್ವಾಸದಲ್ಲಿ ಮೈತ್ರಿಕೂಟದ ನಾಯಕರಿದ್ದಾರೆ.
ಇಂಡಿಯಾ ಕೂಟದ ನಾಯಕರ ಜತೆಗೆ ಮಾಧ್ಯಮಗೋಷ್ಠಿಯಲ್ಲಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ ಖರ್ಗೆ, ‘ಈ ಚುನಾವಣೆಯು ಸೈದ್ಧಾಂತಿಕ ಹೋರಾಟವಾಗಿದೆ. ನ್ಯಾಯಮೂರ್ತಿ ರೆಡ್ಡಿ ಅವರು ಭಾರತದ ಅತ್ಯಂತ ವಿಶಿಷ್ಟ ಮತ್ತು ಪ್ರಗತಿಪರ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರು’ ಎಂದು ಬಣ್ಣಿಸಿದರು.
ವಿರೋಧ ಪಕ್ಷದ ಸಂಸದರು ಬುಧವಾರ ಮಧ್ಯಾಹ್ನ 1 ಗಂಟೆಗೆ ‘ಸಂವಿಧಾನ ಸದನ’ದ ಸೆಂಟ್ರಲ್ ಹಾಲ್‌ನಲ್ಲಿ ಸಭೆ ಸೇರಲಿದ್ದಾರೆ ಎಂದು ಅವರು ಹೇಳಿದರು. ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್, ‘ಈ ಕೂಟವು ಇಂಡಿಯಾ ಬಣ ಅಲ್ಲವೆಂದು ಖರ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ, ಈ ಕೂಟದಲ್ಲಿ ಎಎಪಿ ಇರಲಿದೆ’ ಎಂದು ಒತ್ತಿ ಹೇಳಿದರು.
79 ವರ್ಷದ ರೆಡ್ಡಿ ಅವರು ಗೋವಾದ ಮೊದಲ ಲೋಕಾಯುಕ್ತರಾಗಿದ್ದರು. ತೆಲಂಗಾಣದಲ್ಲಿ ಜಾತಿ ಜನಗಣತಿಗಾಗಿ ಅಲ್ಲಿನ ಕಾಂಗ್ರೆಸ್ ಸಮಿತಿ ರಚಿಸಿದ್ದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ, ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. 2011ರ ಜುಲೈನಲ್ಲಿ ನಿವೃತ್ತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.