ಮುಂಬೈ: ಮಹಾರಾಷ್ಟ್ರದ ಹಳ್ಳಿಯೊಂದರ ಗ್ರಾಮಸ್ಥರು ಹೊಸದಾಗಿ ಹಾಕಿರುವ ರಸ್ತೆಯ ಡಾಂಬರನ್ನು ಬರಿಗೈನಲ್ಲಿ ಎತ್ತುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಲವು ಮಂದಿ ಟ್ವಿಟರ್ ಬಳಕೆದಾರರು ಈ ವಿಡಿಯೊ ಹಂಚಿಕೊಂಡಿದ್ದಾರೆ.
36 ಸೆಕೆಂಡುಗಳ ವಿಡಿಯೊದಲ್ಲಿ ಕಾರ್ಪೆಟ್ ರೀತಿಯ ವಸ್ತುವನ್ನು ಬಳಸಿ ಸ್ಥಳೀಯ ಗುತ್ತಿಗೆದಾರ ಹಾಕಿರುವ ಡಾಂಬರನ್ನು ಗ್ರಾಮಸ್ಥರು ಮೇಲೆತ್ತುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿರುವ ಸ್ಥಳೀಯ ಗುತ್ತಿಗೆದಾರ ರಾಣಾ ಠಾಕೂರ್ ಎಂಬವರ ವಿರುದ್ಧ ಜನರು ವಾಗ್ದಾಳಿ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ, ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಡ್ ತಾಲೂಕಿನ ಕರ್ಜತ್ ಹಸ್ತ್ ಪೊಖರಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.
ಈ ರಸ್ತೆ ನಿರ್ಮಾಣಕ್ಕೆ ಜರ್ಮನಿ ತಂತ್ರಜ್ಞಾನ ಬಳಸಿದ್ದಾಗಿ ಗುತ್ತಿಗೆದಾರ ಹೇಳಿಕೊಂಡಿರುವುದಾಗಿಯೂ ವರದಿ ತಿಳಿಸಿದೆ.
ಕಳಪೆ ಕಾಮಗಾರಿಯನ್ನು ಅನುಮೋದಿಸಿರುವ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.