‘ದಳಪತಿ’ ವಿಜಯ್
ಪಿಟಿಐ ಚಿತ್ರ
ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸ್ಥಾಪಕ, ನಟ ವಿಜಯ್ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ‘ಟಿವಿಕೆ’ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಇಲ್ಲಿ ನಡೆದ ‘ಟಿವಿಕೆ’ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಶೇಷ ನಿರ್ಣಯದ ಮೂಲಕ ವಿಜಯ್ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಡಿಎಂಕೆಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದೂ ಟಿವಿಕೆ ಸ್ಪಷ್ಟಪಡಿಸಿದೆ.
ಸಭೆಯಲ್ಲಿ ಮಾತನಾಡಿದ ವಿಜಯ್, ಸೈದ್ಧಾಂತಿಕ ಶತ್ರು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ನೇರ ಅಥವಾ ಪರೋಕ್ಷ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ರಾಜಕೀಯ ಲಾಭಕ್ಕಾಗಿ ಜನರ ನಡುವೆ ಒಡಕನ್ನು ಸೃಷ್ಟಿಸುತ್ತಾರೆ. ಅವರ ಇಂತಹ ವಿಷಕಾರಿ ಪ್ರಯತ್ನಗಳು ಬೇರೆ ಕಡೆ ಫಲಿಸಬಹುದು. ಆದರೆ ತಮಿಳುನಾಡಿನಲ್ಲಿ ಎಂದಿಗೂ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ, ಮುಂದಿನ ತಿಂಗಳು ದೊಡ್ಡ ಮಟ್ಟದಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಸಲಾಗುವುದು. ಪಕ್ಷದ ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಳ್ಳಿಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು ಎಂದು ‘ಟಿವಿಕೆ’ ಹೇಳಿದೆ.
ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಪ್ರಮುಖ ನಿರ್ಣಯಗಳನ್ನು ಟಿವಿಕೆ ಕಾರ್ಯಕಾರಿ ಸಮಿತಿ ಅಂಗೀಕರಿಸಿದೆ. ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಹಗೆತನದಿಂದ ಕೂಡಿದ್ದು, ಇದು ತಮಿಳುನಾಡಿನ ‘ದ್ವಿಭಾಷಾ’ನೀತಿಯ ಮೇಲೆ ನಡೆದಿರುವ ನೇರ ದಾಳಿ. ತಮಿಳುನಾಡಿನಲ್ಲಿ ಹಿಂದಿ ಮತ್ತು ಸಂಸ್ಕೃತ ಹೇರಿಕೆಯನ್ನು ಒಪ್ಪುವುದಿಲ್ಲ ಎಂದೂ ಟಿವಿಕೆ ಕಾರ್ಯಕಾರಿ ಸಮಿತಿ ಅಭಿಪ್ರಾಯಪಟ್ಟಿದೆ.
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿರುವುದನ್ನೂ ಪಕ್ಷ ಖಂಡಿಸುತ್ತದೆ. ತಮಿಳುನಾಡಿನಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಕಡಿತ ಮಾಡಿ, ಬಿಜೆಪಿ ಪರ ಮತಗಳನ್ನು ಹೆಚ್ಚಿಸುವುದೇ ಇದರ ಮುಖ್ಯ ಉದ್ದೇಶ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ’ ಎಂದು ‘ಟಿವಿಕೆ’ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.