ADVERTISEMENT

ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಪಿಟಿಐ
Published 7 ಜನವರಿ 2026, 14:48 IST
Last Updated 7 ಜನವರಿ 2026, 14:48 IST
ನಟ ವಿಜಯ್‌ 
ನಟ ವಿಜಯ್‌    

ಚೆನ್ನೈ: ತಮಿಳು ನಟ ವಿಜಯ್‌ ಅವರ ‘ಜನ ನಾಯಗನ್‌’ ಚಿತ್ರಕ್ಕೆ ‘ಯುಎ 16+’ ವಿಭಾಗದಲ್ಲಿ ಸೆನ್ಸಾರ್‌ ನೀಡುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಎಫ್‌ಸಿ) ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಕಾಯ್ದಿರಿಸಿದೆ. 

ಚಿತ್ರ ನಿರ್ಮಿಸಿರುವ ಕೆವಿಎನ್‌ ಪ್ರೊಡಕ್ಷನ್‌ ಎಲ್‌ಎಲ್‌ಪಿ, ಈ ಅರ್ಜಿಯನ್ನು ಸಲ್ಲಿಸಿದೆ. ನ್ಯಾಯಮೂರ್ತಿ ಪಿ.ಟಿ ಆಶಾ ಅವರು ಆದೇಶವನ್ನು ಕಾಯ್ದಿರಿಸಿದರು. 

ಪ್ರಕರಣದ ವಿಚಾರಣೆ ವೇಳೆ, ಸಾಲಿಸಿಟರ್‌ ಜನರಲ್ ಎ.ಆರ್‌.ಎಲ್‌ ಸುಂದರೇಶನ್‌ ಅವರು, ಚಿತ್ರವನ್ನು ಪರಿಶೀಲಿಸಿದ ಸಮಿತಿಯ ಸದಸ್ಯರೊಬ್ಬರು ನೀಡಿದ ದೂರಿನ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಚಿತ್ರದ 14 ದೃಶ್ಯಗಳ ಕುರಿತು ಅವರು ಆರೋಪಿಸಿದ್ದಾರೆ.

ADVERTISEMENT

ಅರ್ಜಿದಾರರ ಪರ ವಕೀಲರು, ‘ಮಂಡಳಿಯ ಉಳಿದ ಎಲ್ಲ ಸದಸ್ಯರೂ ಪ್ರಮಾಣಪತ್ರ ನೀಡಲು ಒಪ್ಪಿಕೊಂಡಿದ್ದಾರೆ. ಒಬ್ಬ ಸದಸ್ಯರ ಆಕ್ಷೇಪದ ಕಾರಣದಿಂದ ಪ್ರಮಾಣಪತ್ರ ತಡೆಹಿಡಿಯಲಾಗದು. ನಿರ್ಮಾಪಕರು ಚಿತ್ರಕ್ಕೆ ₹500 ಕೋಟಿ ಹೂಡಿಕೆ ಮಾಡಿದ್ದಾರೆ. ಪೊಂಗಲ್‌ ಹಬ್ಬದ ಪ್ರಯುಕ್ತ ಇರುವ ರಜಾ ದಿನಗಳ ಮೊದಲು ಜ.9ರಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು. 

ಸೆನ್ಸಾರ್‌ ಮಂಡಳಿಯ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಮಾಡಿದರೂ ಪ್ರಮಾಣಪತ್ರ ನೀಡಲಾಗಿಲ್ಲ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.