ವಿಜಯ್ ಮಲ್ಯ
ಮುಂಬೈ: ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಯುತ ವಿಚಾರಣೆಯ ಭರವಸೆ ದೊರೆತರೆ, ಭಾರತಕ್ಕೆ ಮರಳುವ ಬಗ್ಗೆ ಗಂಭೀರವಾಗಿ ಯೋಚಿಸುವುದಾಗಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ರಾಜ್ ಶಮಾನಿ ಅವರೊಂದಿಗೆ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಮಲ್ಯ, ತಮ್ಮ ವಿರುದ್ಧದ ಆರೋಪಗಳು, ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪತನ ಮತ್ತು ಭಾರತಕ್ಕೆ ಮರಳುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ.
‘ಭಾರತಕ್ಕೆ ಹಿಂದಿರುಗಿ ಹೋಗದಿದ್ದಕ್ಕಾಗಿ ‘ಪಲಾಯನಗಾರ’ ಎಂದು ನನ್ನನು ಕರೆದರು. ನಾನೇನು ಓಡಿ ಹೋಗಿರಲಿಲ್ಲ. ಪೂರ್ವ ನಿಗದಿತ ಭೇಟಿಗಾಗಿ ವಿದೇಶಕ್ಕೆ ತೆರಳಿದ್ದೆ. ಆದರೆ, ಕೆಲವು ಕಾರಣಗಳಿಂದ ನಾನು ದೇಶಕ್ಕೆ ಹಿಂದಿರುಗಲಿಲ್ಲ. ಆ ನಿರ್ಧಾರ ನನಗೆ ನ್ಯಾಯವೇ ಅನ್ನಿಸಿತ್ತು. ನೀವು ನನ್ನನ್ನು ‘ಪಲಾಯನಗಾರ’ ಎಂದು ಕರೆಯಲು ಬಯಸಿದರೆ ಹಾಗೆ ಕರೆಯಿರಿ. ಆದರೆ, ‘ಕಳ್ಳ’ ಎನ್ನುವುದು ಎಲ್ಲಿಂದ ಬಂತು? ‘ಕಳ್ಳತನ’ ಮಾಡಿರುವುದು ಎಲ್ಲಿದೆ?’ ಎಂದು ಕೇಳಿದ್ದಾರೆ.
ಇದೇ ವೇಳೆ, ಕಿಂಗ್‌ಫಿಶರ್ ಏರ್‌ಲೈನ್ಸ್ ಪತನದ ಬಗ್ಗೆ ಮಾತನಾಡಿದ ಮಲ್ಯ, ವಿಮಾನಯಾನ ಸಂಸ್ಥೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಿರುವುದಾಗಿ ತಿಳಿಸಿದ್ದಾರೆ.
‘ಆಗಿನ ಹಣಕಾಸು ಮಂತ್ರಿಯಾಗಿದ್ದ ಪ್ರಣಬ್ ಮುಖರ್ಜಿ ಅವರ ಬಳಿಗೆ ಹೋಗಿ ಸಮಸ್ಯೆಯ ಬಗ್ಗೆ ತಿಳಿಸಿದ್ದೆ. ಇಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಉದ್ಯೋಗಿಗಳ ಕಡಿತ ಮತ್ತು ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದ್ದೆ. ಆದರೆ, ನನ್ನ ಮನವಿಯನ್ನು ಆಗ ತಿರಸ್ಕರಿಸಲಾಯಿತು’ ಎಂದು ಹೇಳಿದ್ದಾರೆ.
ಅಂತಿಮವಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಕಿಂಗ್‌ಫಿಶರ್, ತನ್ನೆಲ್ಲಾ ಕಾರ್ಯಾಚರಣೆಯನ್ನು ನಿಲ್ಲಿಸಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2016ರ ಮಾರ್ಚ್ 2ರಂದು ಭಾರತ ತೊರೆದಿರುವ ಮಲ್ಯ, ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕ್‌ಗಳಿಗೆ ಸುಮಾರು ₹9 ಸಾವಿರ ಕೋಟಿ ವಂಚಿಸಿದ ಪ್ರಕರಣದಲ್ಲಿ ಭಾರತಕ್ಕೆ ಬೇಕಾದ ಆರೋಪಿಯಾಗಿದ್ದಾರೆ.
ಸದ್ಯ ಬ್ರಿಟನ್‌ನಲ್ಲಿ ನೆಲೆಸಿರುವ ಅವರು, ಭಾರತಕ್ಕೆ ಗಡೀಪಾರಾಗುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.