ADVERTISEMENT

ಎಫ್ಐಆರ್‌ಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ವಿಜಯ್ ಶಾ ಅರ್ಜಿ: ನಾಳೆ ವಿಚಾರಣೆ

ಪಿಟಿಐ
Published 15 ಮೇ 2025, 6:59 IST
Last Updated 15 ಮೇ 2025, 6:59 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ಭೋಪಾಲ್‌: ಮಧ್ಯಪ್ರದೇಶದ ಸಚಿವ ಹಾಗೂ ಬಿಜೆಪಿ ಮುಖಂಡ ವಿಜಯ್‌ ಶಾ ತಮ್ಮ ವಿರುದ್ಧದ ಎಫ್‌ಐಆರ್‌ಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವಿಜಯ್‌ ಶಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಸಚಿವ ಶಾ ನೀಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆ ಕುರಿತು ಹೈಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು ಎಫ್‌ಐಆರ್ ದಾಖಲಿಸುವಂತೆ ನಿನ್ನೆ ಸೂಚನೆ ನೀಡಿತ್ತು. 

ADVERTISEMENT

ವಿಜಯ್‌ ಶಾ ಕೋರಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ಸಮ್ಮಿಸಿದೆ.

ಮುಖ್ಯ ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾ. ಅಗಸ್ಟೀನ್ ಜಾರ್ಜ್ ಅವರು ನಾಳೆ (ಮೇ 16) ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ವಿಜಯ್‌ ಶಾ ವಕೀಲರು ಹೇಳಿದ್ದಾರೆ.

ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನೀವು ಸರ್ಕಾರದ ಜವಾಬ್ದಾರಿಯುತ ಸಚಿವರಲ್ಲವೇ? ಎಂದು ಸಚಿವರ ಕುರಿತಾಗಿ ನ್ಯಾಯಪೀಠ ಅವರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.

ಸಚಿವ ಶಾ ಹೇಳಿದ್ದೇನು: ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ್ದ ಸಚಿವ ವಿಜಯ್ ಶಾ ‘ಆಪರೇಷನ್ ಸಿಂಧೂರ’ ಕುರಿತು ಪ್ರಸ್ತಾಪಿಸಿದ್ದರು. ಅಲ್ಲದೇ, ಕರ್ನಲ್‌ ಸೋಫಿಯಾ ಅವರನ್ನು ‘ಭಯೋತ್ಪಾದಕರ ಸಹೋದರಿ’ ಎಂಬಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಶಾ ಹೇಳಿಕೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಬಳಿಕ ಎಚ್ಚೆತ್ತುಕೊಂಡ ಶಾ, ‘ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ, 10 ಬಾರಿ ಕ್ಷಮೆ ಯಾಚಿಸಲು ನಾನು ಸಿದ್ಧ. ಕರ್ನಲ್‌ ಖುರೇಷಿ ಅವರನ್ನು ನನ್ನ ಸಹೋದರಿಗಿಂತಲೂ ಹೆಚ್ಚು ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.