ADVERTISEMENT

ಸ್ಟಾಲಿನ್ ಅಂಕಲ್ ಎಂದ ವಿಜಯ್‌ | ನಟನಿಗೆ ರಾಜಕೀಯ ಸಭ್ಯತೆ ಕೊರತೆ: ಸಚಿವರ ತಿರುಗೇಟು

ಪಿಟಿಐ
Published 24 ಆಗಸ್ಟ್ 2025, 11:37 IST
Last Updated 24 ಆಗಸ್ಟ್ 2025, 11:37 IST
   

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರನ್ನು 'ಅಂಕಲ್‌' ಎಂದು ಸಂಬೋಧಿಸಿದ್ದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ನಟ ದಳಪತಿ ವಿಜಯ್‌ ಅವರನ್ನು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಹಾಗೂ ಕೃಷಿ ಸಚಿವ ಎಂಆರ್‌ಕೆ ಪನ್ನೀರ್‌ಸೆಲ್ವಂ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

'ವಿಜಯ್ ಅವರು ಅಪಕ್ವ ರೀತಿಯಲ್ಲಿ ಮಾತನಾಡಿದ್ದಾರೆ. ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರು ಅಸಂಬದ್ಧ ಭಾಷೆಯನ್ನು ಬಳಸಬಹುದೇ ಎಂಬ ಬಗ್ಗೆ ಯೋಚಿಸಬೇಕು' ಎಂದು ಸಚಿವ ಅನ್ಬಿಲ್ ಮಹೇಶ್ ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಮುಖ್ಯಮಂತ್ರಿಗೆ ಸಾರ್ವಜನಿಕ ಜೀವನದಲ್ಲಿ 50 ವರ್ಷಗಳ ಅನುಭವವಿದೆ. ಅವರು ಆಡಳಿತಾರೂಢ ಡಿಎಂಕೆ ಪಕ್ಷದ ಮುಖ್ಯಸ್ಥರೂ ಆಗಿದ್ದಾರೆ. ಅವರ ವಿರುದ್ಧ ಅನುಚಿತ ಪದ ಬಳಕೆ ಸ್ವೀಕಾರಾರ್ಹವೇ ಎಂಬುದನ್ನು ವಿಜಯ್ ಮತ್ತು ಅವರ ಬೆಂಬಲಿಗರು ಯೋಚಿಸಬೇಕು' ಎಂದಿದ್ದಾರೆ.

ADVERTISEMENT

ವಿಜಯ್‌ ಅವರ ಕುಟುಂಬವು ಡಿಎಂಕೆ ಸ್ಥಾಪಕ, ದಿವಂಗತ ಎಂ ಕರುಣಾನಿಧಿ, ಸಿ.ಎಂ ಸ್ಟಾಲಿನ್ ಮತ್ತು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿತ್ತು ಎಂದೂ ಅವರು ಉಲ್ಲೇಖಿಸಿದ್ದಾರೆ.

ವಿಜಯ್‌ ಹೇಳಿಕೆಯನ್ನು ಖಂಡಿಸಿದ ಸಚಿವ ಎಂಆರ್‌ಕೆ ಪನ್ನೀರ್‌ಸೆಲ್ವಂ, 'ನಟನಿಗೆ ರಾಜಕೀಯ ಸಭ್ಯತೆಯ ಕೊರತೆಯಿದೆ' ಎಂದು ಹೇಳಿದ್ದಾರೆ.

'ಸಿನಿಮಾ ಮತ್ತು ರಾಜಕೀಯ ಒಂದೇ ಅಲ್ಲ, ಬಹುಶಃ ಅಭಿಮಾನಿಗಳ ಗುಂಪನ್ನು ನೋಡಿ ಆ ನಟ ಪ್ರಭಾವಿತನಾಗಿ , ಸಿನಿಮಾದಲ್ಲಿ ಸಂಭಾಷಣೆ ಹೇಳುತ್ತಿರುವಂತೆ ಮಾತನಾಡಿದ್ದಾರೆ' ಎಂದು ಕುಟುಕಿದ್ದಾರೆ.

ವಿಜಯ್‌ ಹೇಳಿದ್ದೇನು?

ಗುರುವಾರ ಸಂಜೆ ಮಧುರೈನಲ್ಲಿ ನಡೆದ ಟಿವಿಕೆ ಪಕ್ಷದ ರಾಜ್ಯಮಟ್ಟದ ಎರಡನೇ ಬೃಹತ್ ಸಮಾವೇಶದಲ್ಲಿ ಆಡಳಿತಾರೂಢ ಡಿಎಂಕೆಯನ್ನು ಟೀಕಿಸುತ್ತಾ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು, ‘ಸ್ಟಾಲಿನ್ ಅಂಕಲ್, ಏನು ಅಂಕಲ್? ನೀವು ಮಹಿಳೆಯರಿಗೆ ₹1,000 ನೀಡಿದರೆ ಸಾಕೇ? ಮಹಿಳೆಯರ ಅಳು ನಿಮಗೆ ಕೇಳಿಸುತ್ತದೆಯೇ? ತುಂಬಾ ತಪ್ಪು ಅಂಕಲ್, ತುಂಬಾ ತಪ್ಪು. ನೀವು ಮಹಿಳೆಯರಿಗೆ ಮೋಸ ಮಾಡುತ್ತಿದ್ದೀರಿ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.