ADVERTISEMENT

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದಿಂದ ವಿಕಾಸ್ ದುಬೆ ಸಹಚರ ಬಂಧನ

ಪಿಟಿಐ
Published 11 ಜುಲೈ 2020, 13:00 IST
Last Updated 11 ಜುಲೈ 2020, 13:00 IST
ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್
ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್    

ಮುಂಬೈ: ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರ ಮತ್ತು ಆತನ ಕಾರು ಚಾಲಕನನ್ನು ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ ಬಂಧಿಸಿದೆ.

ಕಾನ್ಪುರ ಜಿಲ್ಲೆಯಲ್ಲಿ ಕಳೆದ ವಾರ ಎಂಟು ಪೊಲೀಸರ ಹತ್ಯೆಗೈದ ಗುಂಪಿನ ಸದಸ್ಯರಲ್ಲಿ ಒಬ್ಬನಾಗಿದ್ದ ಅರವಿಂದ್ ಅಲಿಯಾಸ್ ಗುಡ್ಡನ್ ರಾಮ್‌ವಿಲಾಸ್ ತ್ರಿವೇದಿ (46) ಮತ್ತು ಆತನ ಕಾರು ಚಾಲಕ ಸೋನು ತಿವಾರಿ (30) ಅವರನ್ನು ಬಂಧಿಸಲಾಗಿದೆ ಎಂದು ಎಟಿಎಸ್‌ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ದೇಶಮಾನೆ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ನಂತರ ವಿಕಾಸ ದುಬೆ ಮತ್ತು ಇತರರ ಜತೆ ತ್ರಿವೇದಿ ನಾಪತ್ತೆಯಾಗಿದ್ದ. ಮುಂಬೈ ಎಟಿಎಸ್‌ನ ಜುಹು ಘಟಕಕ್ಕೆ ಈತನ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಥಾಣೆಯ ಕೋಲ್‌ಶೇಟ್‌ ಪ್ರದೇಶದಲ್ಲಿ ಕಾರ್ಯಚರಣೆ ಕೈಗೊಳ್ಳಲಾಗಿದೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡವು ತ್ರಿವೇದಿ ಮತ್ತು ಆತನ ಕಾರು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ADVERTISEMENT

2001ರಲ್ಲಿ ಉತ್ತರ ಪ್ರದೇಶದ ರಾಜಕಾರಣಿ ಸಂತೋಷ್ ಮಿಶ್ರಾ ಹತ್ಯೆ ಸೇರಿದಂತೆ ಹಲವು ಅಪರಾಧಗಳಲ್ಲಿ ತಾನು ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ತ್ರಿವೇದಿ ಒಪ್ಪಿಕೊಂಡಿದ್ದಾನೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧನದ ಬಗ್ಗೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಗೆ (ಎಸ್‌ಟಿಎಫ್) ಮಾಹಿತಿ ನೀಡಲಾಗಿದೆ ಎಂದು ಎಟಿಎಸ್‌ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.