ಲಖನೌ: ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ಶನಿವಾರ ಹೋಳಿ ಆಚರಣೆ ವೇಳೆ ಸಂಭವಿಸಿದ ಹಿಂಸಾಚಾರದಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಕೆಲವು ಕಡೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಬಲವಂತವಾಗಿ ಬಣ್ಣ ಎರಚುವುದು, ಜಾತಿ ಕಲಹಗಳು ಮತ್ತು ಕುಡಿತದ ಚಟದಿಂದ ಉಂಟಾದ ಘರ್ಷಣೆಗಳಿಂದ ಅಲ್ಲಲ್ಲಿ ಹಿಂಸಾಚಾರಗಳು ಸಂಭವಿಸಿವೆ. ಇದರಿಂದ ಹಲವು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಫರೂಖಾಬಾದ್ ಜಿಲ್ಲೆಯಲ್ಲಿ, ಹೋಳಿ ಆಚರಣೆಗೆ ಹೋಗುತ್ತಿದ್ದ ದಲಿತರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಮಹಿಳೆ ಸೇರಿ ಆರು ಜನರು ಗಾಯಗೊಂಡಿದ್ದಾರೆ.
ಮಥುರಾ ಜಿಲ್ಲೆಯಲ್ಲಿ ಜೈತ್ ಪ್ರದೇಶದ ಬಾಟಿ ಗ್ರಾಮದಲ್ಲಿ ಮೇಲ್ಜಾತಿಯವರು ಮತ್ತು ದಲಿತರ ನಡುವಿನ ಘರ್ಷಣೆಯಲ್ಲಿ 10 ಜನ ಗಾಯಗೊಂಡಿದ್ದಾರೆ. ಮೇಲ್ಜಾತಿಯ ಇಬ್ಬರು, ದಲಿತರ ಮೇಲೆ ಬಲವಂತವಾಗಿ ಗುಲಾಲ್ ಎರಚಲು ಯತ್ನಿಸಿದರು. ಇದರಿಂದ ಜಗಳ ನಡೆದು, ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಶಾಂಬಿ ಜಿಲ್ಲೆಯಲ್ಲಿ ಸ್ಥಳೀಯ ನಗರ ಪಂಚಾಯತ್ ಅಧ್ಯಕ್ಷರ ಇಬ್ಬರು ಪುತ್ರರು ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಅವರ ಸಮವಸ್ತ್ರ ಹರಿದಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಂತ ಕಬೀರ್ ನಗರ ಜಿಲ್ಲೆಯ ಕಾರಿ ಗ್ರಾಮದಲ್ಲಿ ಸಂಗೀತ ನುಡಿಸುವ ವಿಚಾರಕ್ಕೆ ಜಗಳ ನಡೆದು, ಹಲವು ಗುಡಿಸಲುಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ.
ಸುಲ್ತಾನ್‌ಪುರ ಜಿಲ್ಲೆಯ ಸರಾಯ್ ಸಮೋಖ್‌ಪುರ ಗ್ರಾಮದಲ್ಲಿ ಹೋಳಿ ಆಚರಣೆ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಾಗ ಗಾಯಗೊಂಡಿದ್ದ 60 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
ಬಾರಾಬಂಕಿ ಜಿಲ್ಲೆಯ ರಾಮನಗರ ಪ್ರದೇಶದ ನಂದೌ ಪಾರಾ ಗ್ರಾಮದಲ್ಲಿ ಹೋಳಿ ಆಡುವಾಗ ಏಳು ಮಂದಿ ಗುಂಪು, 32 ವರ್ಷದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.