ADVERTISEMENT

Civic Poll Results: ಕೇರಳದ ಹಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರ

ಕೇರಳ | ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಹಿಂಸಾಚಾರ: ಹಲವು ಜಿಲ್ಲೆಗಳಲ್ಲಿ ಸಂಘರ್ಷ

ಪಿಟಿಐ
Published 14 ಡಿಸೆಂಬರ್ 2025, 19:57 IST
Last Updated 14 ಡಿಸೆಂಬರ್ 2025, 19:57 IST
   

ಕೋಯಿಕ್ಕೊಡ್ (ಕೇರಳ): ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೇರಳದ ಹಲವು ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಡೀ ಹಿಂಸಾಚಾರ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಯಿಕ್ಕೋಡ್‌ ಜಿಲ್ಲೆಯ ಏರಾಮಲದ‌ಲ್ಲಿ ಕಾಂಗ್ರೆಸ್ ಕಚೇರಿ ಇಂದಿರಾ ಗಾಂಧಿ ಭವನದ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ಮಾಡಿದ ಆರೋಪ ಕೇಳಿಬಂದಿದ್ದರಿಂದ ರಾತ್ರಿಯಿಡೀ ಉದ್ವಿಗ್ನತೆ ನೆಲೆಸಿತ್ತು.

ಸುಮಾರು 200 ಮಂದಿಯ ಗುಂಪು ಮಾರಕಾಸ್ತ್ರಗಳನ್ನು ಹಿಡಿದು ಕಾಂಗ್ರೆಸ್ ಕಚೇರಿಯತ್ತ ಮೆರವಣಿಗೆ ನಡೆಸಿ ಕಟ್ಟಡಕ್ಕೆ ಹಾನಿ ಉಂಟುಮಾಡಿದ್ದಾರೆ. ಇದರಿಂದ ಸುಮಾರು ₹5 ಲಕ್ಷ ನಷ್ಟ ಉಂಟಾಗಿದೆ ಎಂದು ಎಡಚೇರಿ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರತಿಮೆಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸುದ್ದಿ ಹರಡಿದ ಬೆನ್ನಲ್ಲೇ ಯುಡಿಎಫ್ ಕಾರ್ಯಕರ್ತರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಉದ್ವಿಗ್ನತೆ ನೆಲೆಸಿತು. ಸ್ಥಳಕ್ಕೆ ಇನ್ನಷ್ಟು ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಣ್ಣೂರು ಜಿಲ್ಲೆಯ ಪಾನೂರಿನಲ್ಲಿ ಮುಸ್ಲಿಂ ಲೀಗ್‌ನ ಹಲವು ಕಾರ್ಯಕರ್ತರ ಮನೆಗಳನ್ನು ಗುರಿಯಾಗಿಸಿ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದಾಗಿ ಆರೋಪಿಸಲಾಗಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಹಾನಿಗೊಳಿಸಿದ್ದಾರೆ.

ಯುಡಿಎಫ್‌ ವಿಜಯೋತ್ಸವಕ್ಕೆ ಸಿಪಿಎಂ ಕಾರ್ಯಕರ್ತರು ಅಡ್ಡಿಪಡಿಸಿದ್ದು ಸಂಘರ್ಷ ಉಂಟಾಗಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವರ ವಿರುದ್ಧ ಪ್ರಕರಣ

*ವಯನಾಡ್‌ ಜಿಲ್ಲೆಯ ಸುಲ್ತಾನ್‌ ಬತ್ತೇರಿಯಲ್ಲಿ ಯುಡಿಎಫ್‌ ಕಾರ್ಯಕರ್ತ ಮತ್ತು ಆತನ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದಾಗಿ ಆರೋಪಿಸಲಾಗಿದೆ. 40 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

*ಸುಲ್ತಾನ್‌ ಬತ್ತೇರಿಯಲ್ಲಿ ಸಿಪಿಎಂ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕೆಲವು ಯುಡಿಎಫ್‌ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ

*ಕಣ್ಣೂರು ಜಿಲ್ಲೆಯ ಉಳಿಕ್ಕಲ್‌ನಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ಕಾರ್ಯಕರ್ತರ ಮಧ್ಯೆ ಸಂಘರ್ಷ
ನಡೆದಿದೆ

*ಕಾಸರಗೋಡು ಜಿಲ್ಲೆಯ ಬೇಡಗಂನಲ್ಲಿ ಎಲ್‌ಡಿಎಫ್‌ ವಿಜಯೋತ್ಸವಕ್ಕೆ ಯುಡಿಎಫ್‌ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿದೆ

*ತಿರುವನಂತಪುರದ ನೆಯ್ಯಾಟ್ಟಿನ್‌ಕರದಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆದಿದೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮಗೆ ಭಾರಿ ಯಶಸ್ಸು ಲಭಿಸಿದೆ ಎಂದು ಹೇಳುವ ಮೂಲಕ ಬಿಜೆಪಿ ಸುಳ್ಳು ಸಂಕಥನವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ
ಕೆ.ಸಿ. ವೇಣುಗೋಪಾಲ್ , ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.