ADVERTISEMENT

ಮತದಾನಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಕಚ್ಚಾ ಬಾಂಬ್‌ ಬಳಕೆ

ಏಜೆನ್ಸೀಸ್
Published 27 ಮಾರ್ಚ್ 2021, 2:58 IST
Last Updated 27 ಮಾರ್ಚ್ 2021, 2:58 IST
ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ
ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ   

ಕೋಲ್ಕತ್ತ: ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗುವ ಕೆಲ ಗಂಟೆಗಳ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಪಶ್ಚಿಮ ಬಂಗಾಳದ ಕೆಲ ಜಿಲ್ಲೆಗಳಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳಾಗಿರುವ ಬಗ್ಗೆ ವರದಿಯಾಗಿದೆ.

ಪೂರ್ವ ಕಾಂಟೈ ಮತ್ತು ಪಶ್ಚಿಮ ಕಾಂಟೈ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ. ಎರಡೂ ಕಡೆಯ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪೂರ್ವ ಮೇದಿನಿಪುರದಲ್ಲಿ ಶುಕ್ರವಾರ ತಡರಾತ್ರಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಇದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್‌ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋಲ್ಕತ್ತದ ಬಿಧನ್‌ನಗರದಲ್ಲಿಯೂ ಕಾರ್ಯಕರ್ತರ ನಡುವೆ ಘರ್ಷಣೆಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚುನಾವಣೆಗೆ ನಿಯೋಜಿಸಲಾಗಿದ್ದ ವಾಹನವೊಂದಕ್ಕೆ ಪುರುಲಿಯಾದಲ್ಲಿ ಬೆಂಕಿ ಹಚ್ಚಲಾಗಿದ್ದು, ಜಿಲ್ಲೆಯಾದ್ಯಂತ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು (ಶನಿವಾರ) ನಡೆಯುತ್ತಿದೆ.

ಮೊದಲ ಹಂತದ ಮತದಾನ ನಡೆಯುವ 30 ಕ್ಷೇತ್ರಗಳ ಪೈಕಿ 27ರಲ್ಲಿ ಪ್ರಸಕ್ತ ಟಿಎಂಸಿ ಶಾಸಕರು ಇದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಇನ್ನೊಂದು ಕ್ಷೇತ್ರದಲ್ಲಿ ಆರ್‌ಎಸ್‌ಪಿ ಶಾಸಕರಿದ್ದಾರೆ.

2019ರಲ್ಲಿ ಈ ಕ್ಷೇತ್ರಗಳ ಚಿತ್ರಣ ಬದಲಾಗಿದ್ದು, ಈ ಭಾಗದ ಎಲ್ಲಾ ಐದು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ತಲಾ 29 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಟಿಎಂಸಿಯ ಅಭ್ಯರ್ಥಿಗಳಿದ್ದಾರೆ. ಎಡಪಕ್ಷಗಳು, ಕಾಂಗ್ರೆಸ್‌ ಹಾಗೂ ಐಎಸ್‌ಎಫ್‌ ಮೈತ್ರಿಕೂಟವು 30 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.