ADVERTISEMENT

ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 11:24 IST
Last Updated 19 ಡಿಸೆಂಬರ್ 2022, 11:24 IST
   

ನವದೆಹಲಿ: ಐರೋಪ್ಯ ಒಕ್ಕೂಟದ ರಾಷ್ಟ್ರದಲ್ಲಿ ಓಡಾಡಲು ಅಗತ್ಯವಾಗಿರುವ ಶೆಂಗಾನ್‌ ವೀಸಾಕ್ಕೆ ಸಂಬಂಧಿಸಿದಂತೆ 64 ವ್ಯಕ್ತಿಗಳ ಕಡತ ಫ್ರಾನ್ಸ್‌ ರಾಯಭಾರ ಕಚೇರಿಯಿಂದ ನಾಪತ್ತೆಯಾದ ಪ್ರಕರಣದಲ್ಲಿ ಇದೇ ಕಚೇರಿಯ ಇಬ್ಬರು ಮಾಜಿ ಉದ್ಯೋಗಿಗಳು ತಪ್ಪಿತಸ್ಥರು ಎಂಬುದು ಗೊತ್ತಾಗಿದೆ.

ಈ ಇಬ್ಬರ ವಿರುದ್ಧ ಸಿಬಿಐ ಇತ್ತೀಚೆಗೆ ಆರೋಪ ಹೊರಿಸಿತ್ತು. ಮಾಜಿ ಅಧಿಕಾರಿಗಳಾದ ಶುಭಂ ಶೋಕೀನ್ ಮತ್ತು ಆರತಿ ಮಂಡಲ್ ಅವರು ಪ್ರತಿ ವೀಸಾಕ್ಕೆ ₹ 50 ಸಾವಿರ ಪಡೆಯುವ ಮೂಲಕ ₹ 32 ಲಕ್ಷ ವಂಚಿಸಿದ್ದಾರೆ.

ಇಬ್ಬರು ಆರೋಪಿಗಳು ಜ. 1 ಮತ್ತು ಮೇ 6 ರ ನಡುವೆ 484 ವೀಸಾ ಕಡತಗಳನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ 64 ಕಡತಗಳು ವಲಸೆ ಅಪಾಯ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದೆಎಂದು ಆರೋಪಿಸಲಾಗಿದೆ.

ADVERTISEMENT

ಅಕ್ರಮ ಚಟುವಟಿಕೆಯ ಕುರುಹುಗಳು ಸಿಗದಂತೆ ವೀಸಾ ಇಲಾಖೆಯ ದಾಖಲೆಗಳು ಮತ್ತು ಕಡತಗಳನ್ನು ನಾಶಪಡಿಸಿದ್ದಾರೆ ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.

ಸಿಬಿಐ ಶುಕ್ರವಾರ ದೆಹಲಿ, ಪಟಿಯಾಲ, ಗುರುದಾಸ್‌ಪುರ ಮತ್ತು ಜಮ್ಮುವಿನಲ್ಲಿ ಶೋಧ ನಡೆಸಿತು.ಈ ಸಮಯದಲ್ಲಿ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳಾದ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಅನುಮಾನಾಸ್ಪದ ಪಾಸ್‌ಪೋರ್ಟ್‌ಗಳನ್ನುವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.