ADVERTISEMENT

ಕರ್ನಾಟಕದಲ್ಲಿ ‘ಮತ ಕಳ್ಳತನ’ ಆರೋಪ: CIDಗೆ EC ಮಾಹಿತಿ ನೀಡುತ್ತಿಲ್ಲ: ರಾಹುಲ್‌

ಪಿಟಿಐ
Published 20 ಸೆಪ್ಟೆಂಬರ್ 2025, 15:33 IST
Last Updated 20 ಸೆಪ್ಟೆಂಬರ್ 2025, 15:33 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ವಯನಾಡ್ (ಕೇರಳ): ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಆಯೋಗವು (ಇ.ಸಿ) ಅಲ್ಲಿನ ಸಿಐಡಿಗೆ ನೀಡುತ್ತಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ಪುನರುಚ್ಚರಿಸಿದ್ದಾರೆ.

‘ಮತ ಕಳ್ಳತನ’ ಎಷ್ಟು ಪ್ರಮಾಣದಲ್ಲಿ ನಡೆದಿದೆ ಎಂಬ ಮಾಹಿತಿ ಕೋರಿ ಕರ್ನಾಟಕದ ಸಿಐಡಿ ಚುನಾವಣಾ ಆಯೋಗಕ್ಕೆ ಹಲವು ಪತ್ರಗಳನ್ನು ಬರೆದಿದೆ. ಆದರೆ, ಆಯೋಗವು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 

‘ಪೊಲೀಸರು ಕೇಳಿರುವ ಮಾಹಿತಿಯನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್ ಅವರು ಒದಗಿಸುತ್ತಿಲ್ಲ. ಸಿಇಸಿ ವಿರುದ್ಧ ಇದಕ್ಕಿಂತ ದೊಡ್ಡ ಆಪಾದನೆ ಇನ್ನೊಂದಿಲ್ಲ. ಇದು ನನ್ನ ಹೇಳಿಕೆಯಷ್ಟೇ ಅಲ್ಲ. ಇದು ಸತ್ಯ’ ಎಂದು ದೂರಿದ್ದಾರೆ.

ADVERTISEMENT

ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ ಮತಕಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು ಎಂದು ರಾಹುಲ್‌ ಗಾಂಧಿ ಅವರು ಗುರುವಾರ ಗಡುವು ವಿಧಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರು ‘ಮತ ಕಳ್ಳತನ’ ಮಾಡಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಯಾವುದೇ ಸಂದೇಹ ಬಾರದ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಪುರಾವೆಗಳನ್ನು ಒದಗಿಸಲಿದೆ’ ಎಂದು ರಾಹುಲ್ ಹೇಳಿದ್ದಾರೆ.

‘ನಾನು ಈ ಹಿಂದಿನ ಎರಡು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವಂತೆ ಮತ ಕಳ್ಳತನಕ್ಕೆ ಸಂಬಂಧಿಸಿದ ಹೈಡ್ರೋಜನ್‌ ಬಾಂಬ್‌ನಂಥ ಮಾಹಿತಿಯನ್ನು ಶೀಘ್ರ ಬಹಿರಂಗಪಡಿಸಲಿದ್ದೇವೆ. ನಾವು ಪ್ರಬಲ ಪುರಾವೆಗಳನ್ನು ಇಟ್ಟುಕೊಂಡೇ ಎಲ್ಲ ಹೇಳಿಕೆಗಳನ್ನು ನೀಡುತ್ತಿದ್ದೇವೆ’ ಎಂದಿದ್ದಾರೆ.

ರಾಹುಲ್‌ ಅವರು ಶುಕ್ರವಾರ ಆಯೋಗವನ್ನು ‘ಚುನಾವ್‌ ಕಾ ಚೌಕಿದಾರ್‌’ (ಚುನಾವಣೆಯ ಕಾವಲುಗಾರ) ಎಂದು ಕರೆದಿದ್ದರಲ್ಲದೆ, ‘ಚುನಾವಣೆಯ ಕಾವಲುಗಾರ ಎಚ್ಚರವಾಗಿಯೇ ಇದ್ದನಲ್ಲದೆ, ಮತ ಕಳ್ಳತನವನ್ನೂ ನೋಡುತ್ತಿದ್ದ. ಆ ಬಳಿಕ ಕಳ್ಳರನ್ನು ರಕ್ಷಿಸಿದ’ ಎಂದು ಲೇವಡಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.