ADVERTISEMENT

Vote Chori: ವಿಡಿಯೊ ಮೂಲಕ ಕಾಂಗ್ರೆಸ್‌ನಿಂದ ಮತಕಳವು ಜಾಗೃತಿ

ಪಿಟಿಐ
Published 13 ಆಗಸ್ಟ್ 2025, 14:21 IST
Last Updated 13 ಆಗಸ್ಟ್ 2025, 14:21 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ:ಮತಕಳವು ಕುರಿತು ಜಾಗೃತಿ ಮೂಡಿಸುವ ವಿಡಿಯೊವನ್ನು ಕಾಂಗ್ರೆಸ್‌ ಬುಧವಾರ ಬಿಡುಗಡೆ ಮಾಡಿದ್ದು, ‘ಮತ ಕಳವಿನ ವಿರುದ್ಧ ಜನರು ಧ್ವನಿಯೆತ್ತ ಬೇಕು ಮತ್ತು ಆ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯ ಹಿಡಿತದಿಂದ ರಕ್ಷಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನರಲ್ಲಿ ಮನವಿ ಮಾಡಿದ್ದಾರೆ.

‘ಬೂತ್‌ ಪರ್‌ ವೋಟ್‌ ಚೋರಿ’ ಎಂಬ ಶೀರ್ಷಿಕೆಯ ವಿಡಿಯೊವನ್ನು ಖರ್ಗೆ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದು, ‘ಈ ಬಾರಿ ಪ್ರಶ್ನೆ ಗಳನ್ನು ಕೇಳಿ, ಉತ್ತರಕ್ಕಾಗಿ ಒತ್ತಾಯಿಸಿ, ಮತಕಳವಿನ ವಿರುದ್ಧ ಧ್ವನಿ ಎತ್ತಿ’ ಎಂದು ಹೇಳಿದ್ದಾರೆ.

ಒಂದು ನಿಮಿಷದ ಈ ವಿಡಿಯೊವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೂ ಹಂಚಿಕೊಂಡಿದ್ದು, ‘ನಿಮ್ಮ ಮತದ ಕಳವು, ನಿಮ್ಮ ಅಧಿಕಾರದ ಕಳವು, ನಿಮ್ಮ ಗುರುತಿನ ಕಳವು’ ಎಂದು ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಈ ಜಾಗೃತಿ ವಿಡಿಯೊವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಹಂಚಿಕೊಂಡಿದ್ದು, ‘ಮತದಾನ ನಿಮ್ಮ ಹಕ್ಕು. ಅದನ್ನು ಉಳಿಸಿಕೊಳ್ಳಿ, ಮತ ಕಳ್ಳತನದ ವಿರುದ್ಧ ಮಾತನಾಡಿ’ ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?:

ಕಾಂಗ್ರೆಸ್‌ ರೂಪಿಸಿರುವ ಈ ಜಾಗೃತಿ ವಿಡಿಯೊದಲ್ಲಿ, ಮತಗಟ್ಟೆಗೆ ಸರದಿಯಲ್ಲಿ ಒಂದು ಕುಟುಂಬದ ಇಬ್ಬರು ಸದಸ್ಯರು ಬರುತ್ತಾರೆ. ಕೇಸರಿ ಬಣ್ಣದ ಟವಲ್‌ ಧರಿಸಿರುವ ಇಬ್ಬರು ಯುವಕರು, ‘ಈಗಾಗಲೇ ನಿಮ್ಮ ಮತಗಳು ಚಲಾವಣೆಯಾಗಿವೆ’ ಎಂದು ಹೇಳುತ್ತಾರೆ. ಇದರಿಂದ ಬೇಸತ್ತ ಇಬ್ಬರು ಮತದಾರರು ಸರದಿಯಿಂದ ಕದಲುತ್ತಾರೆ. ಆಗ ಈ ಇಬ್ಬರು ಯುವಕರು ಮತಗಟ್ಟೆಯ ಅಧಿಕಾರಿಯತ್ತ ತಿರುಗಿ ಹೆಬ್ಬೆರಳನ್ನು ತೋರಿಸಿ ತಲೆಯಾಡಿಸುತ್ತಾರೆ. ಅದಕ್ಕೆ ಅಧಿಕಾರಿಯೂ ಸ್ಪಂದಿಸುತ್ತಾರೆ. ಈ ಅಧಿಕಾರಿ ಕುಳಿತಿದ್ದ ಮೇಜಿನ ಮೇಲೆ ‘ಚುನಾವಣಾ ಚೋರಿ ಆಯೋಗ’ ಎಂಬ ಫಲಕವನ್ನು ಪ್ರದರ್ಶಿಸಲಾಗಿದೆ.   

ಮೂರು ಕಾರ್ಯಕ್ರಮ:

ಮತ ಕಳವು ಕುರಿತು ದೇಶದಾದ್ಯಂತ ಜನರಲ್ಲಿ ಜಾಗೃತಿ ಮೂಡಿಲು ಮೂರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಅಧ್ಯಕ್ಷ ಕನ್ಹಯ್ಯ ಕುಮಾರ್‌ ತಿಳಿಸಿದರು. 

ಇದೇ 14ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಲೋಕತಂತ್ರ ಉಳಿಸಿ’ ಮೆರವಣಿಗೆ ನಡೆಯಲಿದೆ. ಇದೇ 22ರಿಂದ ಸೆಪ್ಟೆಂಬರ್‌ 7ರವರೆಗೆ ‘ಮತ ಕಳವು, ಅಧಿಕಾರ ಕಳವು’ ರ‍್ಯಾಲಿ ನಡೆಯಲಿದೆ. ಅಲ್ಲದೆ ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 15ರವರೆಗೆ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಅವರು ವಿವರಿಸಿದರು.

ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ಸ್ವತಂತ್ರವಾಗಿ ಪ್ರತಿಕ್ರಿಯಿಸಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಾರದು
–ಸಚಿನ್‌ ಪೈಲಟ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಆಯೋಗದ ವಿರುದ್ಧ ವಾಗ್ದಾಳಿ 

‘ಸಿಬಿಐ, ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಗಳು ಪರಿಣಾಮಕಾರಿ ಆಗದ ಕಾರಣ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯು ಬಿಹಾರದಲ್ಲಿ ಚುನಾವಣಾ ಆಯೋಗವನ್ನು ಬಳಸಿ ಕೊಳ್ಳುತ್ತಿದೆ. ಈ ಮೂಲಕ ಅದು ಬಿಹಾರದ ವಿಧಾನಸಭಾ ಚುನಾವಣೆಯನ್ನು ‘ಫಿಕ್ಸ್‌’ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಾಗ್ದಾಳಿ ನಡೆಸಿದರು.

ಬಿಜೆಪಿಯ ಅನೇಕ ಬೆಂಬಲಿಗರಿಗೆ ಚುನಾವಣಾ ಆಯೋಗವು ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳನ್ನು ಒದಗಿಸುತ್ತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ನಾಯಕರೂ ಆದ ಮುಜಾಫರ್‌ಪುರದ ಮೇಯರ್‌ ನಿರ್ಮಲಾ ದೇವಿ ಅವರು ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದರು.  ‘ಚುನಾವಣಾ ಆಯೋಗವು ವಿಶ್ವಾಸದ್ರೋಹ ಎಸಗುತ್ತಿದೆ’ ಎಂದು ಆರೋಪಿಸಿದ ಅವರು, ‘ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಆಯ್ಕೆ ಮುಕ್ತವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.