ADVERTISEMENT

ಬಿಹಾರ | ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಎಗಳ ಸಂಖ್ಯೆ ಹೆಚ್ಚಳ

ಪಿಟಿಐ
Published 11 ಜುಲೈ 2025, 15:21 IST
Last Updated 11 ಜುಲೈ 2025, 15:21 IST
   

ಪಟ್ನಾ: ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಗಾಗಿ ವಿವಿಧ ರಾಜಕೀಯ ಪಕ್ಷಗಳು 1.5 ಲಕ್ಷಕ್ಕೂ ಅಧಿಕ ಬೂತ್‌ಮಟ್ಟದ ಏಜೆಂಟ್‌ಗಳನ್ನು (ಬಿಎಲ್‌ಎ) ನೇಮಿಸಿವೆ. 

ಈ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪಕ್ಷಗಳೂ ಈಗ ಹೆಚ್ಚಿನ ಸಂಖ್ಯೆಯ ಬಿಎಲ್‌ಎಗಳನ್ನು ನೇಮಿಸುತ್ತಿವೆ ಎಂದು ಚುನಾವಣಾ ಆಯೋಗದ ಮಾಹಿತಿ ಬಹಿರಂಗಪಡಿಸಿದೆ.

ಜೂನ್‌ 24ರಂದು ಈ ಪ್ರಕ್ರಿಯೆ ಆರಂಭವಾದಾಗಿನಿಂದ ಆಯೋಗದಲ್ಲಿ ನೋಂದಾಯಿಸಲಾದ ಬಿಎಲ್‌ಎಗಳ ಸಂಖ್ಯೆಯಲ್ಲಿ ಶೇ 13ರಷ್ಟು ಹೆಚ್ಚಳವಾಗಿದೆ ಎಂದು ದತ್ತಾಂಶಗಳು ತಿಳಿಸಿವೆ.

ADVERTISEMENT

ಸಿಪಿಐ (ಎಂಎಲ್‌) ಲಿಬರೇಶನ್, ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷಗಳು ಬೂತ್‌ಮಟ್ಟದ ಏಜೆಂಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿವೆ. ಎಡಪಕ್ಷಗಳ ಬಿಎಲ್‌ಎಗಳ ಸಂಖ್ಯೆ 233 ರಿಂದ 1,227ಕ್ಕೆ ಏರಿಕೆಯಾಗಿದೆ. 8,585ರಷ್ಟಿದ್ದ ಕಾಂಗ್ರೆಸ್‌ನ ಬಿಎಲ್‌ಎಗಳ ಸಂಖ್ಯೆ ಈಗ 16,500ಕ್ಕೆ ಹೆಚ್ಚಳವಾಗಿದೆ.

‘ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ವಿಶೇಷವಾಗಿ, ನಮ್ಮ ಪ್ರದೇಶದಲ್ಲಿ ಯಾವುದೇ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ಬಿಎಲ್‌ಎಗಳನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇವೆ’ ಎಂದು ಸಿಪಿಐ (ಎಂಎಲ್‌) ಲಿಬರೇಶನ್‌ನ ರಾಜ್ಯ ಕಾರ್ಯದರ್ಶಿ ಕುನಾಲ್‌ ತಿಳಿಸಿದ್ದಾರೆ.

ಬಿಜೆಪಿಯು ಅತಿಹೆಚ್ಚು ಬಿಎಲ್‌ಎಗಳನ್ನು (52,689) ಹೊಂದಿದ್ದರೆ, ಆರ್‌ಜೆಡಿ (47,504) ಎರಡನೇ ಸ್ಥಾನದಲ್ಲಿದೆ.

ಪರಿಷ್ಕರಣೆ ಪ್ರಕ್ರಿಯೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 5.22 ಕೋಟಿ ಮತದಾರರ ಸಮೀಕ್ಷೆ ಪೂರ್ಣಗೊಂಡಿದೆ. ಈ ಸಂಖ್ಯೆ ರಾಜ್ಯದ ಒಟ್ಟು ಮತದಾರರ ಮೂರನೇ ಎರಡರಷ್ಟು ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.