
ನವದೆಹಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ 2ನೇ ಹಂತದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಬಿಜೆಪಿ ಹೊರತಾಗಿ ಇತರೆ ಪಕ್ಷಗಳನ್ನು ಬೆಂಬಲಿಸುವ ಮತದಾರರ ಹೆಸರಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಭಾರಿ ಪಿತೂರಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಪಿತೂರಿ ಹಾಗೂ ಪ್ರಜಾಪ್ರಭುತ್ವದ ಕೊಲೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಎಸ್‌ಐಆರ್ ಕರಡು ಪಟ್ಟಿ ಬಿಡುಗಡೆ ಬಳಿಕ ರಾಜ್ಯದಲ್ಲಿ ಸುಮಾರು 45 ಲಕ್ಷ ಜನರು ಪಟ್ಟಿಯಿಂದ ಕಾಣೆಯಾಗಿದ್ದಾರೆ. ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣದಿಂದ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಚುನಾವಣಾ ಆಯೋಗ ಅಳಸಿ ಹಾಕಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಗೋವಿಂದ್ ಒತ್ತಾಯಿಸಿದ್ದಾರೆ.
ಜನವರಿ 3ರವರೆಗೂ ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲವಿರಲಿಲ್ಲ. ಜನವರಿ 3ರಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಜಸ್ಥಾನಕ್ಕೆ ಭೇಟಿ ನೀಡಿ, ಸಭೆ ನಡೆಸಿದರು. ಆ ಬಳಿಕ ಮತದಾರರ ಕರಡು ಪಟ್ಟಿಯಲ್ಲಿ ಏಕಾಏಕಿ ಬದಲಾವಣೆಗಳಾಗಿವೆ. ಮತದಾರರ ಹೆಸರುಗಳು ಮಯಾ ಆಗಿವೆ ಎಂದು ಗೋವಿಂದ್ ತಿಳಿಸಿದ್ದಾರೆ.
ಗೋವಾ, ಲಕ್ಷದ್ವೀಪ, ರಾಜಸ್ಥಾನ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳ ಅರ್ಜಿ ಸಲ್ಲಿಸುವ ಅವಧಿ ಗುರುವಾರ (ನಿನ್ನೆ) ಕೊನೆಗೊಳ್ಳಬೇಕಿತ್ತು, ಆದರೆ ಇದೀಗ ಈ ಅವಧಿಯನ್ನು ಜನವರಿ 19ರವರೆಗೆ ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 16ರಂದು ಕರಡು ಪಟ್ಟಿಯನ್ನು ಪ್ರಕಟಿಸಿತ್ತು. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಅಥವಾ ಅಳಸಿ ಹಾಕಲು ಆಕ್ಷೇಷಣೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಸಮಯಾವಕಾಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.