ನವದೆಹಲಿ: ಬಿಹಾರದಲ್ಲಿ ನಡೆಸುತ್ತಿರುವ ರೀತಿಯಲ್ಲಿಯೇ ದೇಶದಾದ್ಯಂತ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಯನ್ನು (ಎಸ್‌ಐಆರ್) ಚುನಾವಣಾ ಆಯೋಗ ಮುಂದಿನ ತಿಂಗಳಿಂದ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ದಿಸೆಯಲ್ಲಿ ಆಯೋಗವು ಎಲ್ಲ ರಾಜ್ಯಗಳಲ್ಲಿನ ತನ್ನ ಚುನಾವಣಾ ಶಾಖೆಯನ್ನು ಸಕ್ರಿಯಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಅನ್ನು ‘ಸಾಂವಿಧಾನಿಕ ಹೊಣೆಗಾರಿಕೆ’ ಎಂದು ಕಳೆದ ವಾರ ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡಿತ್ತು. ಹೀಗಾಗಿ, ಆಯೋಗ ಈ ಕಸರತ್ತನ್ನು ದೇಶದಾದ್ಯಂತ ವಿಸ್ತರಿಸಲು ಮುಂದಾಗಿದೆ.
ವಿರೋಧ ಪಕ್ಷಗಳು ಈ ಪರಿಷ್ಕರಣಾ ಕಾರ್ಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಎಸ್‌ಐಆರ್ ಕಸಿದುಕೊಳ್ಳುತ್ತದೆ ಎಂದು ಪ್ರತಿಪಾದಿಸಿವೆ.
ಈ ಪ್ರಕರಣ ಕುರಿತು ಇದೇ 28ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಪುನಃ ವಿಚಾರಣೆ ನಡೆಯಲಿದೆ. ಆ ಬಳಿಕವಷ್ಟೇ ಆಯೋಗವು ಎಸ್ಐಆರ್ ಅನ್ನು ರಾಷ್ಟ್ರದಾದ್ಯಂತ ವಿಸ್ತರಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿದೇಶಗಳಿಂದ ಅಕ್ರಮವಾಗಿ ಬಂದಿರುವ ವಲಸಿಗರ ಜನ್ಮ ಸ್ಥಳವನ್ನು ಪರಿಶೀಲಿಸುವ ಮೂಲಕ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವುದು ಆಯೋಗದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದ ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು, ತಮ್ಮ ರಾಜ್ಯಗಳಲ್ಲಿ ಈ ಹಿಂದೆ ಕೊನೆಯದಾಗಿ ನಡೆದ ‘ವಿಶೇಷ ಸಮಗ್ರ ಪರಿಷ್ಕರಣೆ’ ಬಳಿಕ ಪ್ರಕಟವಾದ ಮತದಾರರ ಪಟ್ಟಿಯನ್ನು ಪ್ರಕಟಿಸಲು ಆರಂಭಿಸಿದ್ದಾರೆ.
ಅದರಂತೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2008 ಮತ್ತು ಉತ್ತರಾಖಂಡದಲ್ಲಿ 2006ರಲ್ಲಿ ಎಸ್‌ಐಆರ್ ನಡೆದಿತ್ತು. ಆ ಬಳಿಕದ ಮತದಾರರ ಪಟ್ಟಿಯನ್ನು ಈ ರಾಜ್ಯಗಳ ಸಿಇಒ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಬಿಹಾರದಲ್ಲಿ ಕೊನೆಯ ಬಾರಿಗೆ 2003ರಲ್ಲಿ ಎಸ್‌ಐಆರ್ ನಡೆದಿತ್ತು. ಇತರ ಬಹುತೇಕ ರಾಜ್ಯಗಳಲ್ಲಿ 2002ರಿಂದ 2004ರ ಅವಧಿಯಲ್ಲಿ ವಿಶೇಷ ಪರಿಷ್ಕರಣಾ ಕಾರ್ಯ ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ವರ್ಷ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, 2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ.
ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿದಂತೆ ಕೆಲ ವಿದೇಶಗಳ ಅಕ್ರಮ ವಲಸಿಗರು ವಿವಿಧ ರಾಜ್ಯಗಳಲ್ಲಿ ನೆಲಸಿರುವುದು ಪತ್ತೆಯಾದ ಬೆನ್ನಲ್ಲೇ ಆಯೋಗ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.